ಗುಬ್ಬಿ :
ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿಯ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ನಡೆಸಿದ ಚುನಾವಣೆಯಲ್ಲಿ ಎಚ್.ಡಿ. ಕಾವಲ್ ನ ಸದಸ್ಯೆ ಗಂಗಮ್ಮ ಅವಿರೋಧ ಆಯ್ಕೆಯಾದರು. ಈ ಹಿಂದೆ ಅಧ್ಯಕ್ಷರಾಗಿದ್ದ ಯೋಗಿತಾ ಅವರು ರಾಜೀನಾಮೆ ನೀಡಿದ್ದು, ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಏಕೈಕ ಅಭ್ಯರ್ಥಿಯಾಗಿ ಗಂಗಮ್ಮ ನಾಮಪತ್ರ ಸಲ್ಲಿಸಿದ್ದು, ಗಂಗಮ್ಮ ಅವರನ್ನೇ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷೆ ಗಂಗಮ್ಮ ಮಾತನಾಡಿ, ಅಭಿವೃದ್ದಿ ವಿಚಾರದಲ್ಲಿ ಎಲ್ಲರ ಅಭಿಪ್ರಾಯ ಪಡೆದು ಮಾದರಿ ಗ್ರಾಮ ಪಂಚಾಯಿತಿ ಹೆಗ್ಗಳಿಕೆಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈ ವೇಳೆ ಉಪಾಧ್ಯಕ್ಷೆ ಅನುಸೂಯಮ್ಮ ಮಾತನಾಡಿ, ಎಚ್ಎಎಲ್ ಘಟಕ ಸ್ಥಾಪನೆ ನಂತರ ವಿಶ್ವ ವ್ಯಾಪ್ತಿ ಗುರುತಿಸಿಕೊಂಡ ನಮ್ಮ ಪಂಚಾಯಿತಿಯ ಎಲ್ಲಾ ಗ್ರಾಮಗಳಿಗೆ ರಸ್ತೆ, ನೀರು, ಬೀದಿ ದೀಪ ಒದಗಿಸಿ ಚುನಾಯಿತ ಪ್ರತಿನಿಧಿಗಳ ಮೂಲಕ ಸರ್ಕಾರದ ಹೊಸ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರ ಬೆಂಬಲಿಗರು ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಸದಸ್ಯರಾದ ಸಿದ್ದರಾಮೇಗೌಡ, ಶಿವಸ್ವಾಮಿ, ವಿಜಯ ಗಂಗಾಧರ್, ರಾಧಾ, ಚಂದ್ರಯ್ಯ, ತಿಮ್ಮರಾಜು ಸೇರಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.