ಶಿರಾ:
ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನಿಂದ ಬೆಂಗಳೂರಿಗೆ ನಾಲ್ವರು ಪಾದಯಾತ್ರೆ ಕೈಗೊಂಡಿದ್ದರು. ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಪಾದಯಾತ್ರೆ ಮಾಡ್ತಿದ್ದ ವೇಳೆ ರಸ್ತೆಯಲ್ಲೇ ನಾಲ್ವರು ಅಸ್ವಸ್ಥಗೊಂಡಿರೋ ಘಟನೆ ಶಿರಾ ತಾಲೂಕಿನ ತಾವರೆಕೆರೆ ಸಮೀಪ ನಡೆದಿದೆ. ಕೂಡಲೇ ಅಸ್ವಸ್ಥರನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಹೌದು ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಹರಿಹರದ ಪ್ರೋ.ಬಿ.ಕೃಷ್ಣಪ್ಪ ಸಮಾಧಿಯಿಂದ ಬೆಂಗಳೂರಿಗೆ ನಾಲ್ವರು ಪಾದಯಾತ್ರೆ ಹೊರಟಿದ್ದರು. ನಿನ್ನೆ ಹಿರಿಯೂರು ತಾಲೂಕಿನಿಂದ ಶಿರಾ ತಾಲೂಕಿಗೆ ಪಾದಯಾತ್ರೆ ತಲುಪಿದೆ. ಈ ವೇಳೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತ ನೆಲಮಂಗಲದ ನಾಗರಾಜು, ಚಿಕ್ಕಮಗಳೂರಿನ ತಿಪ್ಪೇಶ್, ಹೊಸಪೇಟೆ ಹನುಮೇಶ್ ಮತ್ತು ಗದಗದ ಬಸವರಾಜು ದೊಡ್ಡಮನಿ ಎಂಬುವವರು ಬಿಸಿಲಿನ ಬೇಗೆಯಿಂದ ಸುಸ್ತಾಗಿ ರಸ್ತೆಯಲ್ಲೇ ಅಸ್ವಸ್ಥರಾಗಿದ್ದರು. ತಕ್ಷಣವೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು, ಚಿಕಿತ್ಸೆ ಬಳಿಕ ನಾಲ್ವರು ಚೇತರಿಸಿಕೊಂಡಿದ್ದಾರೆ.