ರಾಮನಗರ : ಆಸ್ತಿ ಹಾಗೂ ಹಣದ ಆಸೆಗಾಗಿ ಸಾಕು ಮಗನೊಬ್ಬ ತನ್ನನ್ನು ಸಾಕಿ ಬೆಳೆದ ವೃದ್ಧ ತಾಯಿಯ ಮೇಲೆಯೇ ಹಲ್ಲೆ ನಡೆಸಿರುವ ಹೃದಯವಿದ್ರಾವಕ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ.
ನೀಲಮ್ಮ ಎಂಬ ವೃದ್ಧೆ ತನ್ನ ಇಬ್ಬರು ಮಕ್ಕಳೊಂದಿಗೆ ಅನಾಥರಾಗಿದ್ದ ಈಶ್ವರ್ ಎಂಬ ಬಾಲಕನನ್ನು ಸಾಕಿ ಬೆಳೆಸಿದ್ದರು. ಆದರೆ ಈಗ 27 ವರ್ಷದ ಈಶ್ವರ್ ತಾಯಿಯ ಮೇಲೆಯೇ ಹಲ್ಲೆ ಮಾಡಿದ್ದಾನೆ. ನಿನ್ನೆ ಸೋದರ ಮಾವನ ಮನೆಯಲ್ಲಿದ್ದ ನೀಲಮ್ಮ ಅವರನ್ನು ಈಶ್ವರ್ ಮನೆಬದಿ ಎಳೆದೊಯ್ದು, ತಲೆ ಕೂದಲು ಹಿಡಿದು ಎಳೆದು ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ನೀಲಮ್ಮನ ತಮ್ಮನ ಮೇಲೂ ಈಶ್ವರ್ ಹಲ್ಲೆ ನಡೆಸಿದ್ದಾನೆ.
ಆಸ್ತಿ ಮತ್ತು ಮನೆ ಸಂಬಂಧಿತ ದಸ್ತಾವೇಜುಗಳ ವಿಚಾರವಾಗಿ ಈಶ್ವರ್ ಹಾಗೂ ನೀಲಮ್ಮ ನಡುವೆ ಆಗಾಗ ಜಗಳ ನಡೆಯುತ್ತಿದ್ದುದಾಗಿ ತಿಳಿದು ಬಂದಿದೆ. ಈಶ್ವರ್ ತನ್ನ ಸ್ನೇಹಿತರೊಂದಿಗೆ ಬಂದು ಗಲಾಟೆ ಮಾಡಿದ್ದಾನೆ. ಇನ್ನು ಹಲ್ಲೆಯ ದೃಶ್ಯಗಳು ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಈ ಪ್ರಕರಣ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.