ಮಧುಗಿರಿ : ಬೆಂಕಿಯ ಕೆನ್ನಾಲಗೆಗೆ ಅರಣ್ಯ ಸಂಪತ್ತು, ಬೆಳೆಗಳು ನಾಶ

ಬೆಂಕಿ ದುರಂತದಿಂದ ಹಾನಿಗೊಳಗಾದ ಪ್ರದೇಶ
ಬೆಂಕಿ ದುರಂತದಿಂದ ಹಾನಿಗೊಳಗಾದ ಪ್ರದೇಶ
ತುಮಕೂರು

ಮಧುಗಿರಿ:

ಬೇಸಿಗೆ ಆರಂಭಕ್ಕೂ ಮುನ್ನವೇ ಅಲ್ಲಲ್ಲಿ ಬೆಂಕಿ ದುರಂತಗಳು ಸಂಭವಿಸುತ್ತಲೇ ಇದೆ. ಪಾವಗಡ ಹಾಗೂ ಶಿರಾದಲ್ಲಿ ಬೆಂಕಿ ಬಿದ್ದು ಗುಡಿಸಲುಗಳು ನಾಶವಾದ ಘಟನೆ ಬಳಿಕ ಮತ್ತೊಂದು ಅಗ್ನಿ ದುರಂತ ಜರುಗಿದೆ. ಸಾಮಾಜಿಕ ಅರಣ್ಯ ವಲಯದಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಬೆಳೆ ನಾಶವಾಗಿರುವ ಘಟನೆ ಮಧುಗಿರಿ ತಾಲೂಕಿನ ಎಎಂ ಕಾವಲ್‌ನಲ್ಲಿ ಜರುಗಿದೆ.

ಆಕಸ್ಮಿಕವಾಗಿ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ಅಕ್ಕ ಪಕ್ಕದ ಜಮೀನಿಗೂ ವ್ಯಾಪಿಸಿದೆ. ಇದರಿಂದ ಸುಮಾರು ನಾಲ್ಕು ಎಕರೆ ಅಡಿಕೆ ತೋಟ ಹಾಗೂ 60 ತೆಂಗಿನ ಮರ ನಾಶವಾಗಿದೆ. ಸಾಮಾನ್ಯವಾಗಿ ಅರಣ್ಯ ಪ್ರದೇಶದಲ್ಲಿ ಬೇಸಿಗೆಯಲ್ಲಿ ಕಾಡ್ಗಿಚ್ಚು ಸಂಭವಿಸುತ್ತವೆ,  ಇದರಿಂದ ಸಾಕಷ್ಟು ಅರಣ್ಯ ಸಂಪತ್ತು ನಾಶವಾಗುವ ಪ್ರಸಂಗಗಳು ಜರುಗುತ್ತವೆ, ಆದರೆ ಇದೀಗ ಬೇಸಿಗೆ ಆರಂಭಕ್ಕೂ ಮುನ್ನವೇ ಬೆಂಕಿ ದುರಂತಗಳು ಸಂಭವಿಸುತ್ತಿವೆ.

ಮಧುಗಿರಿಯ ಎಎಂ ಕಾವಲ್‌ನ ಅರಣ್ಯ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ರೈತರ ಜಮೀನಿಗೆ ಬೆಂಕಿ ವ್ಯಾಪಿಸಿದೆ, ಇದರಿಂದ ರೈತರ ಜಮೀನಿನಲ್ಲಿದ್ದ ಬೆಳೆಗಳು ಹಾಗೂ ಅರಣ್ಯದಲ್ಲಿದ್ದ ಸಾಕಷ್ಟು ಗಿಡ ಮರಗಳು ಬೆಂಕಿಗಾಹುತಿಯಾಗಿವೆ. ಇದಲ್ಲದೇ ಅಡಿಕೆ ಹಾಗೂ ತೆಂಗಿನ ತೋಟಕ್ಕೆ ಅಳವಡಿಸಿದ್ದ ನೀರಿನ ಪೈಪ್‌ಗಳು ಕೂಡ ಸುಟ್ಟು ಭಸ್ಮವಾಗಿದೆ.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಬೆಂಕಿ ನಂದಿಸುವ ಕೆಲಸ ಮಾಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ, ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಈ ಸಂಬಂಧ ಬಡವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ಅರಣ್ಯ ಸಂಪತ್ತಿಗೆ ಯಾರಾದರೂ ಬೆಂಕಿ ಹಚ್ಚಿದ್ದಾರಾ ಅಥವಾ ಆಕಸ್ಮಿಕವಾಗಿಯೇ ಬೆಂಕಿ ಹೊತ್ತಿಕೊಂಡಿದ್ಯಾ ಎಂದು ತನಿಖೆ ಬಳಿಕ ತಿಳಿದು ಬರಲಿದೆ.  ಬೆಂಕಿ ದುರಂತದಿಂದ ರೈತರ ಬೆಳೆ ನಾಶವಾಗಿದ್ದು ರೈತರು ಕಣ್ಣೀರಾಕುತ್ತಿದ್ದು, ಪರಿಹಾರ ಒದಗಿಸುವಂತೆ ಆಗ್ರಹಿಸುತ್ತಿದ್ದಾರೆ.

 

 

Author:

...
Editor

ManyaSoft Admin

Ads in Post
share
No Reviews