ಸುಂದರವಾಗಿ ಕಾಣಲು ಯಾರಿಗೆ ತಾನೇ ಇಷ್ಟವಿಲ್ಲ? ಚಿಕ್ಕವರಿಂದ ಹಿಡಿದು ಮುದುಕರವರೆಗೂ ಎಲ್ಲರೂ ಯೌವನದಿಂದಿರಲು ಬಯಸುತ್ತಾರೆ. ಅದಕ್ಕಾಗಿ ಅವರು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳನ್ನು ದುಬಾರಿ ಬೆಲೆ ತೆತ್ತು ಖರೀದಿಸಿ ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಆದರೆ, ಅವುಗಳಲ್ಲಿ ರಾಸಾಯನಿಕಗಳು ಬೆರೆತಿರುವುದರಿಂದ ನಿಮ್ಮ ಮುಖದ ಸೌಂದರ್ಯವನ್ನು ಇನ್ನಷ್ಟು ಹಾಳುಮಾಡುತ್ತದೆ. ಆದ್ದರಿಂದ ಅವುಗಳನ್ನು ಬಿಟ್ಟು ನಮ್ಮ ಮನೆಯಲ್ಲಿ ಸುಲಭವಾಗಿ ಸಿಗುವ ಇವುಗಳನ್ನ ನಿಮ್ಮ ಮುಖವನ್ನು ಹೊಳೆಯುವಂತೆ ಮಾಡುತ್ತವೆ.
*ಜೇನುತುಪ್ಪ (ಎಣ್ಣೆಯುಕ್ತ, ಮೊಡವೆ ಚರ್ಮ)
ಜೇನುತುಪ್ಪ ಉತ್ತಮ ಮಾಯಿಶ್ಚರೈಸರ್ ಆಗಿದೆ. ಇದು ಚರ್ಮವನ್ನು ತೇವವಾಗಿಡಲು ಸಹಾಯ ಮಾಡುತ್ತದೆ. ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿರುವುದರಿಂದ, ಮೊಡವೆ ಮತ್ತು ಗುಳ್ಳೆಗಳನ್ನು ನಿವಾರಿಸುತ್ತದೆ. ಇದನ್ನು ಮುಖಕ್ಕೆ ಬಳಸಿದರೆ, ಕಾಂತಿಯುತ ಚರ್ಮವನ್ನು ಪಡೆಯುತ್ತೀರಿ. ಇದನ್ನು ಮುಖಕ್ಕೆ ಬಳಸುವುದರಿಂದ ನಿಮ್ಮ ಮುಖವು ಸ್ವಚ್ಛವಾಗುತ್ತದೆ. ಇದಕ್ಕಾಗಿ ಜೇನುತುಪ್ಪವನ್ನು ನಿಮ್ಮ ಮುಖ ಮತ್ತು ಕತ್ತಿಗೆ ಹಚ್ಚಿ ಸ್ವಲ್ಪ ಹೊತ್ತು ಒಣಗಲು ಬಿಟ್ಟು ನಂತರ 10 ನಿಮಿಷ ಮಸಾಜ್ ಮಾಡಿ ಬೆಚ್ಚಗಿನ ನೀರಿನಿಂದ ತೊಳೆಯಬೇಕು.
*ಹಾಲು
ಖಂಡಿತವಾಗಿಯೂ ಇದು ಎಲ್ಲರ ಮನೆಯಲ್ಲಿಯೂ ಇರುತ್ತದೆ. ಹಾಲು ಚರ್ಮಕ್ಕೆ ತುಂಬಾ ಒಳ್ಳೆಯದು. ಅನೇಕರಿಗೆ ಚರ್ಮ ಕಪ್ಪಾಗಿದೆ ಎಂದು ಹೇಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಹಾಲು ನಿಮಗೆ ತುಂಬಾ ಸಹಾಯಕವಾಗಿದೆ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡರೆ ಮುಖವು ಚೆನ್ನಾಗಿ ಹೊಳೆಯುತ್ತದೆ. ಇದಕ್ಕಾಗಿ ನೀವು ಹಸಿ ಹಾಲನ್ನು ಬಳಸಬೇಕು ಎಂಬುದನ್ನು ನೆನಪಿನಲ್ಲಿಡಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಹಸಿ ಹಾಲನ್ನು ನಿಮ್ಮ ಮುಖಕ್ಕೆ ಹಚ್ಚಿ, ಮಸಾಜ್ ಮಾಡಿದರೆ ಮುಖ ಹೊಳೆಯುತ್ತದೆ.
*ಕಡಲೆ ಹಿಟ್ಟು
ಚರ್ಮದ ಆರೈಕೆಯಲ್ಲಿ ಮನೆಮದ್ದಿನಲ್ಲಿ ಕಡಲೆ ಹಿಟ್ಟು ಪ್ರಮುಖ ಪಾತ್ರ ವಹಿಸುತ್ತದೆ. ಇದು ನೈಸರ್ಗಿಕ ಎಕ್ಸ್‌ಫೋಲಿಯೇಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ ಕಡಲೆ ಹಿಟ್ಟಿನೊಂದಿಗೆ ಸ್ವಲ್ಪ ಅರಿಶಿನ, ಹಾಲು ಅಥವಾ ನೀರು ಸೇರಿಸಿ ಮುಖಕ್ಕೆ ಪೇಸ್ಟ್ ರೀತಿ ಹಚ್ಚಿ, ಚೆನ್ನಾಗಿ ಒಣಗಿದ ನಂತರ ತಣ್ಣೀರಿನಿಂದ ತೊಳೆಯಬೇಕು.
*ಆಲಿವ್ ಎಣ್ಣೆ (ಒಣ ಚರ್ಮ)
ಆಲಿವ್ ಎಣ್ಣೆ ಚರ್ಮದಲ್ಲಿ ಆಂಟಿಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುವುದರಿಂದ, ಇದು ವಯಸ್ಸಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ವಿಶೇಷವಾಗಿ ಒಣ ಚರ್ಮ ಹೊಂದಿರುವವರಿಗೆ ಈ ಎಣ್ಣೆ ತುಂಬಾ ಒಳ್ಳೆಯದು. ಆಲಿವ್ ಎಣ್ಣೆಯನ್ನು ಮುಖಕ್ಕೆ ಬಳಸುವ ಮೊದಲು ನಿಮ್ಮ ಮುಖವನ್ನು ನೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಈ ಎಣ್ಣೆಯಿಂದ ನಿಮ್ಮ ಮುಖ ಮತ್ತು ಕತ್ತಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ, ನಂತರ ಬೆಚ್ಚಗಿನ ನೀರಿನಿಂದ ತೊಳೆದರೆ, ಮುಖವು ಹೊಳೆಯುತ್ತದೆ. ನಿಮ್ಮಲ್ಲಿ ಆಲಿವ್ ಎಣ್ಣೆ ಇಲ್ಲದಿದ್ದರೆ ಬಾದಾಮಿ ಎಣ್ಣೆ ಬಳಸಬಹುದು.