ಗುಬ್ಬಿ:
ನಾಟಕರತ್ನ ಗುಬ್ಬಿ ವೀರಣ್ಣ ಅವರ ತವರೂರು ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಉತ್ಸವ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಕಾಲೇಕು ಕಂಪ್ಲೀಟ್ ಹಳ್ಳಿಯ ಥೀಮ್‌ನಲ್ಲಿ ಮಿಂಚುತ್ತಿತ್ತು. ವಿದ್ಯಾರ್ಥಿಗಳು, ಶಿಕ್ಷಕರೆಲ್ಲರೂ ಸಾಂಪ್ರದಾಯಿಕ ಉಡುಗೆಗಳನ್ನ ತೊಟ್ಟು ಬಂದಿದ್ರು. ಕಲರ್ ಕಲರ್ ಸೀರೆಯುಟ್ಟು ಬಂದಿದ್ದ ಹೆಣ್ಣುಮಕ್ಕಳು, ಗಾಜಿನ ಬಳೆಗಳನ್ನ ತೊಟ್ಟು ಸಂಭ್ರಮಿಸಿದ್ರು.
ಆದ್ರೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ರಂಗಭೂಮಿ ಕಲಾವಿದೆ ಹಾಗೂ ಗಾಯಕಿ ಬಿ.ಜಯಶ್ರೀ ಕಾರ್ಯಕ್ರಮದ ಬಗ್ಗೆ ವೇದಿಕೆಯಲ್ಲಿಯೇ ಬೇಸರವನ್ನ ವ್ಯಕ್ತಪಡಿಸಿದ್ರು. ಜಾನಪದ ಉತ್ಸವ ಎಂಬ ಅಭೂತಪೂರ್ವ ಕಾರ್ಯಕ್ರಮ ಮಾಡಿ ಕೇವಲ ಚಲನಚಿತ್ರ ಗೀತೆಗಳ ಜೊತೆಗೆ ವಾದ್ಯಗೋಷ್ಠಿ ಮಾಡಿ ತಾವೆಲ್ಲರೂ ಕುಣಿದು ಕುಪ್ಪಳಿಸುವ ಕೆಲಸ ಮಾಡುವುದು ಸರಿಯಲ್ಲ. ಜಾನಪದ ಉತ್ಸವದಲ್ಲಿ ಜಾನಪದ ಹಾಡುಗಳು ಇಲ್ಲದೆ ಕೇವಲ ಚಲನಚಿತ್ರ ಗೀತೆಗಳಿಗೆ ಮಾರುಹೋದರೆ ಈ ಕಾರ್ಯಕ್ರಮ ಹೇಗೆ ಯಶಸ್ವಿಯಾಗುತ್ತದೆ. ಮೊಬೈಲ್ ನಲ್ಲಿ ನಿರತರಾಗಿರುವ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸಂಸ್ಕಾರ ಕಾಣದಿರುವುದು ಬೇಸರ ಮೂಡಿಸಿದೆ ಎಂದರು.
ಹಾಡು, ಕಲೆ, ಸೋಬಾನೆ ಪದಗಳ ಮೂಲಕ ಜಾನಪದ ಸೊಗಡನ್ನು ಬಿಂಬಿಸುವ ಕಾರ್ಯಕ್ರಮ ಇದಾಗದಿರುವುದು ಬೇಸರ ಮೂಡಿಸಿದೆ. ಯಾರು ಏನೇ ಬೈದುಕೊಂಡರೂ ನನಗೆ ಬೇಸರವಿಲ್ಲ. ಸೊಗಡಿನ ಕಂಪನ್ನು ಪಸರಿಸುವ ಕೆಲಸವನ್ನು ಮಾಡದಿರುವ ಬಗ್ಗೆ ಎಚ್ಚೆತ್ತು ಮುನ್ನಡೆಯಬೇಕಿದೆ ಎಂದರು. ನಾಟಕ ರಂಗಭೂಮಿ ಸೇರಿದಂತೆ ಜಾನಪದ ಸೊಗಡನ್ನು ಉಳಿಸುವ ನಿಟ್ಟಿನಲ್ಲಿ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಕೆಲಸ ಮಾಡಬೇಕಿದೆ. ಆಗ ಮಾತ್ರ ನಮ್ಮ ಕಲೆ ಸಂಸ್ಕೃತಿ ಉಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಪ್ರಾಂಶುಪಾಲ ಪ್ರಸನ್ನ ಕುಮಾರ್, ನಿಮ್ಮ ಈ ಅಶಿಸ್ತು, ಮೊಬೈಲ್ ಗೀಳನ್ನ ಕಂಡು ಅಥಿತಿಗಳಾಗಿ ಬಂದಿದ್ದ ಜಯಶ್ರೀ ದೇವಿ ಅಮ್ಮನವರು ಬೇಸರ ಮಾಡಿಕೊಂಡಿದ್ದಾರೆ. ಮತ್ತೆ ಹೇಗೆ ಅವರನ್ನ ಬೇರೆ ಕಾರ್ಯಕ್ರಮಕ್ಕೆ ಕರೆಯೋದು ಅಂತಾ ವಿದ್ಯಾರ್ಥಿಗಳನ್ನ ಬೈದರು.