ಉಡುಪಿ :
ಸಾಲಬಾಧೆಯಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದು, ತಂದೆ ಮತ್ತು ಮಗ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆಯಲ್ಲಿ ನಡೆದಿದೆ.
ಕುಂದಾಪುರದ ತೆಕ್ಕಟ್ಟೆ ಗ್ರಾಮದ ನಿವಾಸಿ ಮಾಧವ ದೇವಾಡಿಗ (56), ಅವರ ಪುತ್ರ ಪ್ರಸಾದ್ ದೇವಾಡಿಗ (22) ಹಾಗೂ ಪತ್ನಿ ತಾರಾ ದೇವಾಡಿಗ ಇಂದು ಬೆಳಗಿನ ಜಾವ ಮನೆಯ ಸಮೇಪದ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಾಧವ ದೇವಾಡಿಗ ಮತ್ತು ಪ್ರಸಾದ್ ದೇವಾಡಿಗ ಸಾವನ್ನಪ್ಪಿದ್ದಾರೆ. ಇನ್ನು ತಾರಾ ದೇವಾಡಿಗ ಅವರನ್ನು ತಕ್ಷಣವೇ ಸ್ಥಳೀಯರ ಸಹಕಾರದಿಂದ ರಕ್ಷಿಸಲಾಗಿದ್ದು, ಕೋಟೇಶ್ವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಮಾಧವ ದೇವಾಡಿಗ ಅವರು ಅಂಕದಕಟ್ಟೆಯ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪ್ರಾಥಮಿಕ ಮಾಹಿತಿಯ ಪ್ರಕಾರ, ಕುಟುಂಬ ಸಾಲದ ಭಾರದಿಂದ ಸಂಕಷ್ಟದಲ್ಲಿದ್ದು, ಮಾನಸಿಕ ಒತ್ತಡದ ಮಧ್ಯೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಈ ಘಟನೆಯ ನಂತರ ಗ್ರಾಮದಲ್ಲಿ ಆಘಾತದ ವಾತಾವರಣವಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.