HOSAKOTE : ಆಂಧ್ರಪ್ರದೇಶದ ಸಾರಿಗೆ ಬಸ್-ಲಾರಿ ನಡುವೆ ಭೀಕರ ಅಪಘಾತ | ನಾಲ್ವರು ಸಾವು

HOSAKOTE NEWS : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗೊಟ್ಟಿಪುರ ಗೇಟ್ [GOTTIPURA GATE]  ಬಳಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಗು ಸೇರಿ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ಆಂಧ್ರಪ್ರದೇಶದ ಸಾರಿಗೆ ಬಸ್ಸು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.

ಮೃತಪಟ್ಟವರನ್ನು ಬಸ್ಸಿನಲ್ಲಿದ್ದ ಕೇಶವರೆಡ್ಡಿ (44), ತುಳಸಿ (21), ಪ್ರಣತಿ (4) ಹಾಗೂ 1 ವರ್ಷದ ಮಗು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇತರ 16 ಪ್ರಯಾಣಿಕರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಓವರ್ಟೇಕ್ [OVERTAKE] ಮಾಡಲು ಯತ್ನಿಸಿದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಲಾರಿಗೆ ಢಿಕ್ಕಿಯಾದ ಘಟನೆ ಇದಾಗಿದೆ. ಡಿಕ್ಕಿಯಾದ ರಭಸಕ್ಕೆ ಬಸ್‌ನ ಮುಂಭಾಗ ಹಾಗೂ ಒಂದು ಬದಿ ಭಾರೀ ಹಾನಿಗೊಳಗಾಗಿದೆ.

ಇನ್ನು ಗಾಯಾಳುಗಳನ್ನು ತಕ್ಷಣವೇ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆ ಮತ್ತು ಎಂವಿಜೆ ಆಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌ಪಿಯಾಗಿರುವ ಸಿ.ಕೆ. ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಹೊಸಕೋಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author:

...
Keerthana J

Copy Editor

prajashakthi tv

share
No Reviews