ಶಿರಾ : ಇತ್ತೀಚೆಗೆ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ತುಮಕೂರು ಜಿಲ್ಲೆಯಲ್ಲಿಯೂ ಇಂಥದ್ದೇ ಒಂದು ಘಟನೆ ನಡೆದಿದ್ದು, ವೈದ್ಯರ ನಿರ್ಲಕ್ಷ್ಯದಿಂದಾಗಿ ಎರಡು ತಿಂಗಳ ಕಂದಮ್ಮ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ.
ತುಮಕೂರು ಜಿಲ್ಲೆ ಶಿರಾ ನಗರದ ಅಕ್ಕರೆ ಮಕ್ಕಳ ಆಸ್ಪತ್ರೆಯ ವೈದ್ಯರ ವಿರುದ್ಧ ಇಂಥದ್ದೊಂದು ಗಂಭೀರ ಆರೋಪ ಕೇಳಿಬಂದಿದೆ. ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಶಿರಾದ ಭವಾನಿನಗರದ ನಿವಾಸಿಗಳಾದ ರಮೇಶ್ ಮತ್ತು ಉಮಾ ದಂಪತಿಯ 2 ತಿಂಗಳ ಮಗುವಿಗೆ ಏಕಾಏಕಿ ವಾಂತಿ ಕಾಣಿಸಿಕೊಂಡಿತ್ತು. ಹೀಗಾಗಿ ಮಗುವನ್ನು ಮಧ್ಯರಾತ್ರಿ 12.30ರ ಸುಮಾರಿಗೆ ಶಿರಾದ ಬಾಲಾಜಿನಗರದಲ್ಲಿರುವ ಅಕ್ಕರೆ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯ ವೈದ್ಯರಾದ ಡಾ.ನವೀನ್ ಕುಮಾರ್ ಅವರಿಂದ ಚಿಕಿತ್ಸೆಯನ್ನು ಕೊಡಿಸಿ ಮಗುವನ್ನು ರಾತ್ರಿ ವಾಪಾಸ್ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಇಷ್ಟಾದರೂ ವಾಂತಿ ನಿಲ್ಲದ ಕಾರಣ ಪುನಃ ಇಂದು ಬೆಳಿಗ್ಗೆ 9-30ರ ಸುಮಾರಿಗೆ ಮತ್ತೆ ಅಕ್ಕರೆ ಕ್ಲಿನಿಕ್ ಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಚಿಕಿತ್ಸೆ ನೀಡುವ ವೇಳೆ ಮಗು ಕೊನೆಯುಸಿರೆಳೆದಿದೆ. ಈ ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮಗುವಿನ ಕುಟುಂಬಸ್ಥರು ಆರೋಪಿಸಿದ್ದು, ಖಾಸಗಿ ಆಸ್ಪತ್ರೆಯ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ಜೊತೆಗೆ ಆಸ್ಪತ್ರೆ ಎದುರು ಮಗುವಿನ ಮೃತದೇಹವನ್ನಿಟ್ಟು ಕುಟುಂಬಸ್ಥರು ಪ್ರತಿಭಟನೆಯನ್ನು ಕೂಡ ನಡೆಸಿದ್ದು, ಕಂದಮ್ಮನ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಹಿನ್ನೆಲೆ ಆಸ್ಪತ್ರೆ ಮುಂಭಾಗ ಕೆಲಕಾಲ ಗೊಂದಲದ ವಾತಾವರಣ ಕೂಡ ನಿರ್ಮಾಣವಾಗಿತ್ತು. ಕೊನೆಗೆ ಪೋಲಿಸರು ನ್ಯಾಯ ಕೊಡಿಸುವ ಭರವಸೆ ನೀಡಿದ ಬಳಿಕ ಕುಟುಂಬಸ್ಥರು ಸುಮ್ಮನಾಗಿದ್ದಾರೆ.
ಇನ್ನು ಈ ಅಕ್ಕರೆ ಆಸ್ಪತ್ರೆಯ ವೈದ್ಯ ಶಿರಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾನೆ ಎನ್ನಲಾಗಿದೆ. ಜೊತೆಗೆ ಸ್ವಂತ ಕ್ಲಿನಿಕ್ ಕೂಡ ನಡೆಸುತ್ತಿದ್ದಾನಂತೆ. ಸದ್ಯ ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮಗುವಿನ ಪೋಷಕರು ಪೊಲೀಸರಿಗೆ ದೂರನ್ನು ನೀಡಿದ್ದು, ಈ ಬಗ್ಗೆ ಶಿರಾ ನಗರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಹೀಗಾಗಿ ಪೊಲೀಸರ ತನಿಖೆಯ ಬಳಿಕವಷ್ಟೇ ಈ ಕಂದಮ್ಮನ ಸಾವಿನ ಸತ್ಯಾಸತ್ಯತೆ ಹೊರಬರಬೇಕಿದೆ.