ತುಮಕೂರು : ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಒಡೆತನದಲ್ಲಿರುವ ಶಿಕ್ಷಣ ಸಂಸ್ಥೆಗಳ ಮೇಲೆ ಎರಡನೇ ದಿನವೂ ಇಡಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ನಿನ್ನೆ ತಡರಾತ್ರಿಯವರೆಗೆ ವಿಚಾರಣೆ ಮತ್ತು ದಾಖಲೆಗಳ ಪರಿಶೀಲನೆ ನಡೆಸಿದ ಅಧಿಕಾರಿಗಳು, ಇಂದು ಬೆಳಗ್ಗೆ 6 ಗಂಟೆಯಿಂದ ಮತ್ತೆ ದಾಖಲೆಗಳ ಪರಿಶೀಲನೆ ಆರಂಭಿಸಿದ್ದಾರೆ.
ತುಮಕೂರಿನ ಕುಣಿಗಲ್ ರಸ್ತೆಯಲ್ಲಿರುವ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ, ಹೆಗ್ಗೆರೆ ಬಳಿಯ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿಯ ಸಿದ್ದಾರ್ಥ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮತ್ತೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಇಡಿ ತನಿಖೆ ವೇಳೆ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಿಂದ "ರನ್ಯಾ" ಖಾತೆಗೆ ಸುಮಾರು ₹40 ಲಕ್ಷ ರೂಪಾಯಿ ವರ್ಗಾವಣೆ ಆಗಿರುವುದು ಬಹಿರಂಗವಾಗಿದೆ. ಆದರೆ ಈ ಹಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಮಾತ್ರ ದೊರೆತಿಲ್ಲ, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ. ಇದರ ಜೊತೆ ಮೆಡಿಕಲ್ ಸೀಟ್ ಬ್ಲಾಕಿಂಗ್ ದಂಧೆ ಕೂಡ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ನಡೆಯುತ್ತಿದೆ ಎಂಬ ಆರೋಪದ ಆಯಾಮದಲ್ಲೂ ಶೋಧ ನಡೆಯುತ್ತಿದೆ.
ಆಸ್ತಿ ದಾಖಲಾತಿಗಳು, ಹಣಕಾಸು ಲೆಕ್ಕಪತ್ರಗಳು ಹಾಗೂ ಬ್ಯಾಂಕ್ ವ್ಯವಹಾರಗಳ ಕುರಿತು ತೀವ್ರ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು, ಹಣದ ಮೂಲ ಮತ್ತು ಇದರ ಉದ್ದೇಶ ಕುರಿತು ಸ್ಪಷ್ಟತೆ ಇಲ್ಲದ ಕಾರಣ, ಇಡಿ ಅಧಿಕಾರಿಗಳು ಇಂದು ಸಹ ತನಿಖೆ ಮುಂದುವರೆಸಿದ್ದಾರೆ. ಆದರೆ ಈ ದಾಳಿ ಹಿಂದಿನ ನಿಖರ ಕಾರಣವನ್ನೂ ಇನ್ನೂ ಇಡಿ ಪ್ರಕಟಿಸಿಲ್ಲ. ಆದರೆ ಈ ದಾಳಿ ಎಲ್ಲರ ದೃಷ್ಠಿಯನ್ನು ಸೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದರ ಮೇಲೆ ರಾಜ್ಯ ರಾಜಕೀಯ ವಲಯ ಮತ್ತು ಸಾರ್ವಜನಿಕರ ಕಣ್ಣು ಇದ್ದು, ಹೆಚ್ಚಿನ ವಿವರಗಳು ತನಿಖಾಧಿಕಾರಿಗಳಿಂದಲೇ ಬಯಲಾಗಬೇಕಿದೆ...