ದೊಡ್ಡಬಳ್ಳಾಪುರ : ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿ ತಡೆಗೋಡೆಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಸೊಣಮಾರನಹಳ್ಳಿ ಮತ್ತು ದಂಡುಹಾಸನ ಕೊಡಿಗೇಹಳ್ಳಿ ನಡುವೆ ನಡೆದಿದೆ. ಕೊನಘಟ್ಟ ಗ್ರಾಮದ ನಿವಾಸಿಯಾದ ಮಣಿಕುಮಾರ (28) ಎಂಬುವರು ಮೃತ ದುರ್ದೈವಿಯಾಗಿದ್ದಾರೆ.
ಕೆಲಸ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ವಾಹನದ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿ ತಡೆಗೋಡೆಗೆ ಬೈಕ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.