ದೊಡ್ಡಬಳ್ಳಾಪುರ:
ಶೋಕಿ ಜೀವನಕ್ಕಾಗಿ ದೇವರ ದುಡ್ಡಿಗೆ ಕನ್ನ ಹಾಕಲು ಶೋಕಿಲಾಲ ಅಧಿಕಾರಿಯೊಬ್ಬ ಪ್ಲಾನ್ ಮಾಡಿದ್ದು, ಲಕ್ಷ ಲಕ್ಷ ದೋಚಿ ಎಸ್ಕೇಪ್ ಆಗ್ತಿದ್ದ. ಆದರೆ ತಹಶೀಲ್ದಾರ್ ಅವರ ಸಮಯ ಪ್ರಜ್ಞೆಯಿಂದ ದೇವರ ದುಡ್ಡನ್ನು ದೋಚಿ ಎಸ್ಕೇಪ್ ಆಗ್ತಿದ್ದವನನ್ನು ಲಾಕ್ ಮಾಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ RI ಆಗಿದ್ದ ಹೇಮಂತ್ ಎಂಬಾತ ಸರ್ಕಾರಿ ಕೆಲಸದಲ್ಲಿ ಇದ್ದು, ಕೈ ತುಂಬಾ ಸಂಬಳ ಕೂಡ ಪಡೆದುಕೊಳ್ತಾ ಇದ್ದ. ಆದರೆ ಇವನ ಶೋಕಿಯ ಚಟಕ್ಕೆ ದೇವರ ದುಡ್ಡಿಗೆ ಕನ್ನ ಹಾಕಲು ಮುಂದಾಗಿದ್ದ. ಮುಜರಾಯಿ ಇಲಾಖೆ ಎಫ್ಡಿಎ ಕರ್ತವ್ಯದಲ್ಲಿ ಇದ್ದ ವೇಳೆ ದಿನಾಂಕ 18/05/2023 ರಿಂದ 11/02/2025 ರವರೆಗೆ ತಹಶೀಲ್ದಾರ್ ಅವರ ನಕಲಿ ಸಹಿ ಬಳಸಿ , ಸ್ಟಾಂಪ್, ಸೀಲ್ಗಳನ್ನು ಬಳಸಿ ಲಕ್ಷ ಲಕ್ಷ ಹಣವನ್ನು ಲೂಟಿ ಹೊಡೆದಿದ್ದ. ಇಷ್ಟಲ್ಲದೇ ಮುಜರಾಯಿ ಇಲಾಖೆ ಎಫ್ಡಿಎ ಕರ್ತವ್ಯದಿಂದ ಸಾಸಲು ಹೋಬಳಿ ಆರ್ ಐ ಆಗಿ ವರ್ಗಾವಣೆ ಆದ ಬಳಿಕವೂ ಹೇಮಂತ್ ಕುಮಾರ್ ದಾಖಲೆಗಳನ್ನು ನೀಡುವ ವೇಳೆ ಚೆಕ್ ಬುಕ್ ಗಳನ್ನು ನೀಡದೆ ಉಳಿಸಿಕೊಂಡಿದ್ದ. ಚೆಕ್ನನ್ನು ಬಳಸಿ ಹಲವು ಕಂತುಗಳಲ್ಲಿ ತಹಶಿಲ್ದಾರ್ ಅವರ ನಕಲಿ ಸಹಿ ಬಳಸಿ ಲಕ್ಷ ಲಕ್ಷ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ನಡೆಸಿದ್ದಾರೆ ಎನ್ನಲಾಗಿದೆ.
RI ನ ಕೈಚಳಕ ಗೊತ್ತಾಗ್ತಿದ್ದಂತೆ ಎಚ್ಚೆತ್ತ ತಹಶೀಲ್ದಾರ್ ವಿಭಾ ವಿದ್ಯಾ ರಾಠೋಡ್, ಇದೇ ತಿಂಗಳ 11 ರಂದು ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು, ಹಣವನ್ನು ದೋಖಾ ಮಾಡಿರುವ ಆರೋಪದ ಮೇಲೆ ಸಾಸಲು ಹೋಬಳಿ ಕಂದಾಯ ನಿರೀಕ್ಷಕ ಹೇಮಂತ್ ಕುಮಾರ್ ನನ್ನು ವಶಕ್ಕೆ ಪಡೆದು ಸಾಕಷ್ಟು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಕಲಿ ಸಹಿ ಬಳಸಿದ್ದ ಚೆಕ್ ಗಳನ್ನು ಬೆಂಗಳೂರಿನ ಮೃತಪಟ್ಟಿರುವ ಮಹಿಳೆಯೊಬ್ಬರ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದು, ಆ ಮಹಿಳೆ ಕಳೆದ ಎಂಟು ತಿಂಗಳ ಹಿಂದೆಯೇ ಮೃತಪಟ್ಟಿದ್ದು, ಮೊಮ್ಮಗನ ಬಳಿ ಬ್ಯಾಂಕ್ ದಾಖಲೆ, ಮೊಬೈಲ್, ಸಿಮ್ ಪಡೆದುಕೊಂಡು ಹಂತ ಹಂತವಾಗಿ ಹಣವನ್ನು ಡ್ರಾ ಮಾಡಿಕೊಂಡಿದ್ದಾನೆ ಎಂದು ಆರೋಪ ಮಾಡಲಾಗಿದೆ.
ಪೊಲೀಸ್ ತನಿಖೆ ವೇಳೆ ಮನೆಯಲ್ಲಿ ನಕಲಿ ಆಧಾರ್ ಕಾರ್ಡ್, ನಕಲಿ ಸಿಮ್, ಸೀಲ್, ಸಹಿ ಸೇರಿದಂತೆ ಇತರೆ ವಸ್ತುಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಈ ಶೋಕಿಲಾಲ ದೋಖಾ ಮಾಡಿದ ಹಣದಿಂದ ಸುಮಾರು 10 ಲಕ್ಷ ರೂಪಾಯಿ ಕೊಟ್ಟು ಒಡವೆ, ಮನೆಯನ್ನು ದುರಸ್ಥಿ ಮಾಡಲು ಬಳಸಿಕೊಂಡಿದ್ದು, ಆನ್ಲೈನ್ ಗೇಮ್ಗೂ ಹಣವನ್ನು ಸುರಿದಿದ್ದ ಎನ್ನಲಾಗಿದೆ. ಸದ್ಯ ಈ ಸಂಬಂಧ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.
ಒಟ್ಟಿನಲ್ಲಿ ಇಲಾಖೆಯಲ್ಲಿ ಒಬ್ಬ ಅಧಿಕಾರಿ ದೇವರ ದುಡ್ಡಿಗೆ ಕನ್ನ ಹಾಕಿದ ಅಂದರೆ ಬೇರೆ ಬೇರೆ ಇಲಾಖೆಯ ಕಥೆ ಏನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.