ದೆಹಲಿ: ಪಾಕಿಸ್ತಾನದ ಪರವಾಗಿ ಮೌಖಿಕವಾಗಿ ಬೆಂಬಲ ವ್ಯಕ್ತಪಡಿಸಿದ ಟರ್ಕಿಗೆ ಭಾರತದಿಂದ ಮತ್ತೊಂದು ತೀವ್ರ ಪ್ರತಿಕ್ರಿಯೆ ಸಿಕ್ಕಿದೆ. ಖ್ಯಾತ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆ ಟರ್ಕಿಯ ವಿಶ್ವವಿದ್ಯಾಲಯಗಳೊಂದಿಗೆ ಹೊಂದಿದ್ದ ಎಲ್ಲ ಶೈಕ್ಷಣಿಕ ಒಪ್ಪಂದಗಳನ್ನು ರದ್ದು ಪಡಿಸಿದೆ.
ಈ ಮೂಲಕ ಭಾರತದ ಶಿಕ್ಷಣ ಕ್ಷೇತ್ರವು ಟರ್ಕಿಯ ವಿರುದ್ಧ ತೀವ್ರ ನಿಲುವು ತೆಗೆದುಕೊಂಡಿದ್ದು, ಇನ್ನು ಮುಂದೆ ಯಾವುದೇ ಸಂಶೋಧನಾ ಸಹಕಾರ ಅಥವಾ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳನ್ನು ಮುಂದುವರಿಸದಿರುವ ನಿರ್ಧಾರ ಕೈಗೊಂಡಿದೆ. ಈ ಕುರಿತು ಐಐಟಿ ಬಾಂಬೆ ʼಪ್ರಸ್ತುತ ರಾಜಕೀಯ ಪರಿಸ್ಥಿತಿಯಿಂದಾಗಿ, ಮುಂದಿನ ಆದೇಶ ಬರುವವರೆಗೂ ಟರ್ಕಿ ವಿಶ್ವವಿದ್ಯಾಲಯಗಳೊಂದಿಗಿನ ತನ್ನ ಒಪ್ಪಂದಗಳನ್ನು ರದ್ದುಪಡಿಸಿರುತ್ತದೆ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಇದೇ ವೇಳೆ, ಭಾರತದ ಎಲ್ಲಾ ರಾಜ್ಯಗಳ ವ್ಯಾಪಾರಿ ಸಂಘಟನೆಗಳು ಟರ್ಕಿಯಿಂದ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸಲು ಕರೆ ನೀಡಿವೆ. ವಿದೇಶಾಂಗ ನೀತಿಯ ಹಿನ್ನೆಲೆಯಲ್ಲಿ ಟರ್ಕಿಯ ವರ್ತನೆಗೆ ತಿರುಗೇಟು ನೀಡುತ್ತಿರುವ ಭಾರತ ಶಿಕ್ಷಣ, ಸಂಶೋಧನೆ, ವ್ಯಾಪಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದೆ. ಟರ್ಕಿಯ ಇಂತಹ ನಿಲುವು ಮುಂದುವರಿದರೆ, ಇನ್ನಷ್ಟು ಬ್ಲಾಕ್‌ಲಿಸ್ಟ್ ನಿರ್ಧಾರಗಳು ಎದುರಾಗುವ ಸಾಧ್ಯತೆ ಇದೆ.