ಶಿರಾ:
ಭೀಕರ ಅಪಘಾತ ಸಂಭವಿಸಿ ದ್ವಿಚಕ್ರ ವಾಹನದಲ್ಲಿದ್ದ ದಂಪತಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿಕ್ಕನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದೆ, ಅಪಘಾತದಿಂದ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಆಕೆಯ ಪತಿ ಮೃತಪಟ್ಟಿರುವಂತ ದಾರುಣ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ರುದ್ರಾಪುರ ಗ್ರಾಮದ ನಿವಾಸಿ ನವೀನ್ ಹಾಗೂ ಆತನ ಪತ್ನಿ ಪೂರ್ಣಿಮಾ ಎಂಬುವರು ಮೃತ ದುರ್ದೈವಿಯಾಗಿದ್ದಾರೆ.
ದಂಪತಿ ದ್ವಿಚಕ್ರ ವಾಹನದಲ್ಲಿ ಬೆಂಗಳೂರಿಗೆ ತೆರಳುವಾಗ ಈ ಅಪಘಾತ ಸಂಭವಿಸಿದೆ. ಇನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಉಬ್ಬು ತಗ್ಗಿನಿಂದ ಹಾಗೂ ಹದಗೆಟ್ಟ ರಸ್ತೆಯಿಂದ ದಿನನಿತ್ಯ ಹತ್ತಾರು ಅಪಘಾತಗಳು ಸಂಭವಿಸುತ್ತಿದೆ ಎಂದು ಹೆದ್ದಾರಿ ಪ್ರಾಧಿಕಾರದ ವಿರುದ್ದ ಸ್ಥಳೀಯರು ಹಾಗೂ ವಾಹನ ಸವಾರರು ಅಕ್ರೋಶ ಹೊರ ಹಾಕ್ತಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು, ಸದ್ಯ ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.