ಗುಬ್ಬಿ :
ಗುಬ್ಬಿ ತಾಲೂಕು ಬಿಕ್ಕೇಗುಡ್ಡ ಕಾವಲ್ ಗ್ರಾಮದ ದಲಿತ ಕುಟುಂಬಗಳಿಗೆ ಭೂಮಿ ಮಂಜೂರು ದಾಖಲೆ ಮಾಡದೆ ತೀವ್ರ ತೊಂದರೆ ಅನುಭವಿಸಿದ್ದಾರೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ದಾಖಲೆ ನೀಡದಿರೋದ್ರಿಂದ 50ಕ್ಕೂ ಹೆಚ್ಚು ದಲಿತ ಕುಟುಂಬಗಳು ಪರದಾಡುತ್ತಿವೆ. ಹೀಗಾಗಿ ಗುಬ್ಬಿ ಪಟ್ಟಣದ ತಾಲ್ಲೂಕು ಕಚೇರಿಗೆ ಆಗಮಿಸಿದ ಸಂತ್ರಸ್ತ ದಲಿತ ಕುಟುಂಬ ಸದಸ್ಯರು, ಬಿಕ್ಕೇಗುಡ್ಡ ಕಾವಲ್ ಸರ್ವೇ ನಂಬರ್ 93 ರಲ್ಲಿನ ಜಮೀನು ದುರಸ್ತಿ ಮಾಡಿ ನಕ್ಷೆ ಸಿದ್ಧಪಡಿಸಿ ಈ ದಾಖಲೆ ಆಧಾರ ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಿಕೊಡುವಂತೆ ಅರ್ಜಿ ಸಲ್ಲಿಸಿ ಮನವಿ ಮಾಡಿದರು.
ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ವಿದ್ಯಾಸಾಗರ್ ಮಾತನಾಡಿ, ಎಲ್ಲಾ ಸರ್ಕಾರದಿಂದ ಮೂಲ ಸವಲತ್ತು ಪಡೆದು ನೂರಾರು ವರ್ಷದಿಂದ ವಾಸವಿರುವ ಬಿಕ್ಕೇಗುಡ್ಡ ಕಾವಲ್ ಗ್ರಾಮದ 99 ಎಕರೆ ಪ್ರದೇಶದಲ್ಲಿ 50ಕ್ಕೂ ಹೆಚ್ಚು ದಲಿತ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಖಾಯಂ ಮಂಜೂರಾತಿ ಪಡೆದ ಕುಟುಂಬಕ್ಕೆ ಮಾತ್ರ ಜಮೀನು ನೀಡಿದರೆ ಉಳಿದ ಕುಟುಂಬ ಒಕ್ಕಲೆಬ್ಬಿಸಿದಂತೆ ಆಗುತ್ತದೆ. ಶೇಕಡಾ 80 ರಷ್ಟು ಮಂದಿ ಸಂತ್ರಸ್ತ ದಲಿತ ಕುಟುಂಬಕ್ಕೆ ಅನ್ಯಾಯ ಮಾಡಿದಂತೆ ಆಗುತ್ತದೆ. ಬಗರ್ ಹುಕುಂ ಸಮಿತಿ, ಅಕ್ರಮ ಸಕ್ರಮ ಹೀಗೆ ಅನೇಕ ರೀತಿ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಫಲಾನುಭವಿಗಳಿಗೆ ಭೂಮಿ ನೀಡಬೇಕು. ಇಲ್ಲವಾದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಸ್ಥಳೀಯ ಮುಖಂಡ ಸುರೇಶ್ ಮಾತನಾಡಿ ಕಾವಲ್ ಹೆಸರಿನಲ್ಲಿ ತಾಂತ್ರಿಕ ಸಮಸ್ಯೆ ಮುಂದಿಟ್ಟು ನಮ್ಮ ದಲಿತ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ. ಖಾಯಂ ಮಂಜೂರಾತಿದಾರರು ಹಾಗೂ ಅನುಭವದಾರರು ಎಂಬ ನಮ್ಮಲ್ಲೇ ಕಿತ್ತಾಟ ಆಗುವ ಮುನ್ನ ಎಲ್ಲಾ ದಲಿತ ಕುಟುಂಬಗಳಿಗೆ ಅನುಭವ ಜಾಗವನ್ನು ದುರಸ್ತಿಗೊಳಿಸಿ ನಕ್ಷೆ ಸಿದ್ಧಪಡಿಸಿ ಮಂಜೂರು ದಾಖಲೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.