ಚಿಕ್ಕಬಳ್ಳಾಪುರ:
ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ವೇಳೆ ಅಡ್ಡ ಮತದಾನ ಮಾಡಿದ ಹಿನ್ನೆಲೆ ಕಾಂಗ್ರೆಸ್ನ 8 ಮಂದಿ ನಗರಸಭಾ ಸದಸ್ಯರನ್ನು ಅನರ್ಹ ಮಾಡಲಾಗಿದೆ. ಹೌದು ಚಿಕ್ಕಬಳ್ಳಾಪುರ ನಗರಸಭೆಯ 6 ಮಂದಿ ಹಾಗೂ ಗೌರಿಬಿದನೂರು ನಗರಸಭೆಯ ಇಬ್ಬರು ಸದಸ್ಯರನ್ನು ಅನರ್ಹ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಅಡ್ಡ ಮತದಾನ ಮಾಡಿದ ಚಿಕ್ಕಬಳ್ಳಾಪುರದ ನಗರಸಭಾ ಸದಸ್ಯರ ವಿರುದ್ಧ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ದೂರು ದಾಖಲಿಸಿ, ಅವರ ವಿರುದ್ಧ ವಿಪ್ ಜಾರಿ ಮಾಡಿದ್ರು. ಇನ್ನು ಅಡ್ಡ ಮತದಾನ ಸಂಬಂಧ ಸುಧೀರ್ಘ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅಡ್ಡ ಮತದಾನ ಮಾಡಿದ್ದ ನಿರ್ಮಲ, ಪ್ರಭು, ರತ್ನಮ್ಮ, ಸತೀಶ್, ಸ್ವಾತಿ, ನೇತ್ರಾವತಿ ಹಾಗೂ ಅಂಬಿಕಾ ಎಂಬುವವರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ. ಸದ್ಯ ಚಿಕ್ಕಬಳ್ಳಾಪುರದ ರಾಜಕೀಯ ಪಡಸಾಲೆಯಲ್ಲಿ ಅನರ್ಹಗೊಂಡ ಬಗ್ಗೆಯೇ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
ಇದಲ್ಲದೇ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರಸಭೆಗೆ ನಡೆದ ಚುನಾವಣೆಯಲ್ಲೂ ಅಡ್ಡ ಮತದಾನ ಮಾಡಿದ್ದ ನಗರಸಭೆ ಸದಸ್ಯರಾದ ಮಂಜುಳ ರಮೇಶ್, ಗಿರೀಶ್ ನಾಯಕ್ ಎಂಬ ಇಬ್ಬರನ್ನು ಕೂಡ ಅನರ್ಹಗೊಳಿಸಿ ಜಿಲ್ಲಾಧಿಕಾರಿ ರವೀಂದ್ರ ಆದೇಶ ಹೊರಡಿಸಿದ್ದಾರೆ.