ದೇಶ : 3 ವರ್ಷಗಳಿಗೂ ಅಧಿಕ ಕಾಲ ವಿಶ್ವವನ್ನು ಕಾಡಿ ತೆರೆಮರೆಗೆ ಸರಿದಿದ್ದ ಕೊರೋನಾ ಮತ್ತೆ ಸದ್ದು ಮಾಡತೊಡಗಿದೆ. ಇತ್ತೀಚಿಗೆ ಮತ್ತೆ ಎರಡು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಕಂಡು ಬಂದಿವೆ.
ಸಿಂಗಾಪುರದಲ್ಲಿ ಮೇ 3ಕ್ಕೆ ಅಂತ್ಯವಾದ ವಾರದಲ್ಲಿ 14,200 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದು ಹಿಂದಿನ ವಾರದ ಹೋಲಿಕೆಯಲ್ಲಿ ಶೇಕಡಾ 28ರಷ್ಟು ಹೆಚ್ಚಳವಾಗಿದೆ. ಕೇವಲ ಸೋಂಕಿನಷ್ಟೇ ಅಲ್ಲ, ಆಸ್ಪತ್ರೆಗಳಲ್ಲಿ ದಾಖಲಾದವರ ಸಂಖ್ಯೆಯಲ್ಲೂ ಶೇಕಡಾ 30ರಷ್ಟು ಏರಿಕೆಯು ಕಂಡುಬಂದಿದೆ. ಆರೋಗ್ಯ ತಜ್ಞರ ಅಭಿಪ್ರಾಯ ಪ್ರಕಾರ, ಜನರಲ್ಲಿ ಕೋವಿಡ್ ರೋಗನಿರೋಧಕ ಶಕ್ತಿಯ ಕುಗ್ಗುವಿಕೆಯಿಂದ ಈ ಹೆಚ್ಚಳ ಸಂಭವಿಸಿರಬಹುದು. ಆದರೂ, ಈ ಹೊಸದಾಗಿ ಕಾಣಿಸಿಕೊಂಡಿರುವ ವೈರಸ್ ತಳಿ ಹೆಚ್ಚು ಪ್ರಸರಣಶೀಲ ಎಂದು ನಿಶ್ಚಿತಪಡಿಸಲು ಯಾವುದೇ ಪೂರಕ ಮಾಹಿತಿಯಿಲ್ಲವೆಂದು ಸಿಂಗಾಪುರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇನ್ನೊಂದೆಡೆ ಹಾಂಕಾಂಗ್ನಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಈ ವರ್ಷದ ಗರಿಷ್ಠಕ್ಕೆ ತಲುಪಿದೆ. ಅಂತೆಯೇ, ಸಾವಿನ ಪ್ರಕರಣಗಳೂ ಹೆಚ್ಚಾಗುತ್ತಿವೆ. ನೀರಿನಲ್ಲಿ ಕಂಡುಬರುತ್ತಿರುವ ವೈರಾಣು, ಹೆಚ್ಚುತ್ತಿರುವ ಕೋವಿಡ್ ಪರೀಕ್ಷೆ ಮತ್ತು ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಿಂದ ಮತ್ತೆ ಕೊರೋನಾ ಸ್ಫೋಟವಾಗುವ ಭಯ ಉದ್ಭವವಾಗಿದೆ.
ಕೊರೋನಾ ಮೊದಲ ಬಾರಿ 2019ರ ನವೆಂಬರ್ನಲ್ಲಿ ಪತ್ತೆಯಾಗಿದ್ದು, 704,753,890 ಜನರಲ್ಲಿ ಕಾಣಿಸಿಕೊಂಡಿತ್ತು. 7,010,681 ಮಂದಿ ವಿಶ್ವಾದ್ಯಂತ ಬಲಿಯಾಗಿದ್ದರು. ಕೋವಿಡ್ ಸೋಂಕು ಪಸರಿಸುವಿಕೆಯನ್ನು ನಿಯಂತ್ರಿಸಲು 'ಲಾಕ್ಡೌನ್' ಎಂಬ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲಾಗಿತ್ತು