ಮಧುಗಿರಿ:
ಮಧುಗಿರಿಯ ಇತಿಹಾಸ ಪ್ರಸಿದ್ಧ ದಂಡಿನಮಾರಮ್ಮ ಜಾತ್ರಾ ಮಹೋತ್ಸವ ಇದೇ ಮಾರ್ಚ್ 10 ರಿಂದ ಆರಂಭವಾಗಿದ್ದು, ಮಾರ್ಚ್ 21ರವರೆಗೆ ಸುಮಾರು 10 ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿದೆ. ಜಾತ್ರೆ ಅಂಗವಾಗಿ ನಿತ್ಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಭಕ್ತ ಸಾಗರವೇ ಹರಿದು ಬರ್ತಿದೆ. ದಂಡಿನ ಮಾರಮ್ಮ ಜಾತ್ರೆಯ ಭಾಗವಾದ ದನಗಳ ಜಾತ್ರೆಯೂ ಕೂಡ ನಡೆದಿದ್ದು, ದೇವಿಯ ಪಲ್ಲಕ್ಕಿ ಉತ್ಸವಕ್ಕೆ ಜನರು ಕಾತುರದಿಂದ ಕಾಯ್ತಾ ಇದ್ದಾರೆ.
ಇನ್ನು ದಂಡಿನ ಮಾರಮ್ಮ ಜಾತ್ರೆ ಅಂಗವಾಗಿ ಭಜನಾ ಕಾರ್ಯಕ್ರಮ, ರಥೋತ್ಸವ, ಕುರುಕ್ಷೇತ್ರ ನಾಟಕ, ಭಗವದ್ಗೀತೆ, ಜಾನಪದ ಗೀತೆ, ದೇವರ ಆರಾಧನೆ, ಕೀರ್ತನೆಗಳು, ಕುರುಕ್ಷೇತ್ರ, ಪೌರಾಣಿಕ ನಾಟಕ, ಸುಗಮ ಸಂಗೀತ, ಸೇರಿದಂತೆ ಅಗ್ನಿಕುಂಡ ಮಡಿಲಕ್ಕಿ ಸೇವೆ ನಡೆಯಲಿದೆ. ಅಲ್ಲದೇ ಹಳ್ಳಿಕಾರರಿಂದ ಪಂಚ ಕಳಸ ಸ್ಥಾಪನೆ ಹಾಗೂ ಗೌಡರಿಂದ ಬಾನ ಕಾರ್ಯಕ್ರಮ, ಗ್ರಾಮಸ್ಥರಿಂದ ಆರತಿ, ಸಾರ್ವಜನಿಕವಾಗಿ ಗುಗ್ಗರಿ ಗಾಡಿಗಳ ಸೇವೆ, ಹಳ್ಳಿಕಾರರಿಂದ ಉಯ್ಯಾಲೆ ಉತ್ಸವ, ಕುಂಚಿಟಿಗ ಒಕ್ಕಲಿಗರಿಂದ ಸಿಂಹವಾಹನ ಸೇವೆ ಜರುಗಲಿವೆ. ದೇವಿಯ ದೇಗುಲಕ್ಕೆ ವಿಶೇಷ ಹೂಗಳಿಂದ ಅಲಂಕಾರವನ್ನು ಕೂಡ ಮಾಡಲಾಗ್ತಿದೆ.
ಜಾತ್ರಾ ಮಹೋತ್ಸವದ ಸಿದ್ಧತೆ ವಿಚಾರವಾಗಿ ಸಭೆ ಮಾಡಲಾಗಿದ್ದು, ಅಂಗಡಿ ಇಡುವ ವ್ಯಾಪಾರಸ್ಥರಿಗೆ ರಿಯಾಯಿತಿ ದರದಲ್ಲಿ ಸುಂಕದ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ. ಇದರ ಜೊತೆಗೆ ಜಾತ್ರೆ ಅಂಗವಾಗಿ ಪಟ್ಟಣದ ಎಲ್ಲೆಡೆ ಸ್ವಚ್ಛತಾ ಕಾರ್ಯ ನಡೆದಿದ್ದು, ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಗಿದೆ.