ಚಿತ್ರದುರ್ಗ:
ಪ್ರೇಮಿಗಳಿಬ್ಬರು ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದಕ್ಕೆ ಯುವತಿ ಸಂಬಂಧಿಕರಿಂದ ಯುವಕನ ಮನೆ ಹಾಗೂ ಆತನ ಸಂಬಂಧಿಕರ ಮನೆ ಮೇಲೆ ದಾಳಿ ಮಾಡಿರುವಂತಹ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದಲಿತ ಯುವಕ ಹಾಗೂ ಬಂಡೆಕಟ್ಟೆ ಗ್ರಾಮದ ಯುವತಿ ಪ್ರೀತಿಸುತ್ತಿದ್ದರು. ಮೊನ್ನೆಯಷ್ಟೇ ಇಬ್ಬರು ವಿವಾಹವಾಗಿದ್ದರು. ಮದುವೆಗೆ ಯುವತಿಯ ಪೋಷಕರ ವಿರೋಧವಿತ್ತು. ಪ್ರೇಮಿಗಳು ಮದುವೆಯಾದ ಹಿನ್ನೆಲೆ ಕೋಪಗೊಂಡ ಬಂಡೆಕಟ್ಟೆ ಗ್ರಾಮದ ಯುವತಿ ಸಂಬಂಧಿಕರು ಯುವಕನ ಮನೆ ಬಳಿ ಬಂದು 2 ಬೈಕ್ ಮತ್ತು 1 ಟಾಟಾ ಏಸ್ ಗಳನ್ನು ಹಾನಿ ಮಾಡಿದ್ದಲ್ಲದೇ, ಯುವಕನ ಮನೆ ಸೇರಿ ಆತನ ಸಂಬಂಧಿಕರ 9 ಮನೆಗಳ ಮೇಲೆ ಶುಕ್ರವಾರ ರಾತ್ರಿ ದಾಳಿ ನಡೆಸಿದ್ದಾರೆ.
ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಸ್ಥಳದಲ್ಲೇ ಪೊಲೀಸರು ಬೀಡು ಬಿಟ್ಟಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.