ಚಿಕ್ಕಮಗಳೂರು :
ಕರ್ನಾಟಕದಲ್ಲಿ ನಕ್ಸಲರ ಹೆಜ್ಜೆ ಗುರುತು ಬೆಚ್ಚಿ ಬೀಳಿಸುವಂತಿತ್ತು. ಅವರನ್ನು ಮುಖ್ಯವಾಹಿನಿಗೆ ತರಬೇಕು ಅಂತಾ ಅದೆಷ್ಟು ಪ್ರಯತ್ನ ಪಟ್ಟರು ಕೂಡ ಅವರು ಮುಖ್ಯವಾಹಿನಿಗೆ ಬರುವಂತಹ ಕೆಲಸ ಮಾತ್ರ ಆಗ್ತಾ ಇರಲಿಲ್ಲ. ನಕ್ಸಲ್ ವಿಕ್ರಂ ಗೌಡ ಎನ್‌ಕೌಂಟರ್ ಆದ ಬಳಿಕ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಆರು ಮಂದಿ ನಕ್ಸಲರು ಜನವರಿ 8ರಂದು ಶರಣಾಗತಿಯಾಗಿದ್ದರು. ಶರಣಾದ ಆರು ಮಂದಿ ನಕ್ಸಲರ ತಂಡದಲ್ಲಿ ರವೀಂದ್ರ ಕೂಡ ಇದ್ದರು ಆದರೆ, ವಿಕ್ರಂಗೌಡ ಎನ್‌ಕೌಂಟರ್ ವೇಳೆ ತಂಡದಿಂದ ಬೇರ್ಪಟ್ಟಿದ್ದ ರವೀಂದ್ರ ಇದೀಗ SP ವಿಕ್ರಂ ಅಮಟೆ, ಜಿಲ್ಲಾಧಿಕಾರಿ ಮುಂದೆ ಶರಣಾಗತರಾಗಿದ್ದಾರೆ. ಇವರ ಶರಣಾಗತಿಯಿಂದಾಗಿ ಶಸ್ತ್ರಾಸ್ತ್ರ ಹೋರಾಟದಲ್ಲಿ ತೊಡಗಿಕೊಂಡಿದ್ದ ಎಲ್ಲಾ ಮಾವೋದಿಗಳು ಮುಖ್ಯವಾಹಿನಿಗೆ ಬಂದಂತಾಗಿದೆ.
ಕಳೆದ ಒಂದೂವರೆ ದಶಕದಿಂದ ಭೂಗತನಾಗಿದ್ದ ಶೃಂಗೇರಿಯ ಕೋಟೆ ಹೊಂಡ ಗ್ರಾಮದ ರವೀಂದ್ರ ರವಿ ಕೋಟೆ ನಕ್ಸಲ್ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಕರ್ನಾಟಕ, ತಮಿಳುನಾಡು, ಕೇರಳದ ಗಡಿಭಾಗದಲ್ಲಿ 8 ಮಂದಿಯ ಕರ್ನಾಟಕ ತಂಡದ ನಕ್ಸಲರು ಸಕ್ರಿಯರಾಗಿದ್ದರು. ಈ ನಕ್ಸಲ್ ತಂಡಕ್ಕೆ ವಿಕ್ರಂ ಕಮಾಂಡರ್ ಆಗಿದ್ದರು. ಆದರೆ ಉಡುಪಿಯ ಹೆಬ್ರಿ ಅರಣ್ಯ ಪ್ರದೇಶದಲ್ಲಿ ನಕ್ಸಲ್ ಕಮಾಂಡರ್ ವಿಕ್ರಂ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದರು. ವಿಕ್ರಂ ಹತ್ಯೆ ಬಳಿಕ 6 ಮಂದಿ ಮಾವೋವಾದಿಗಳು ಮಂಡೆಗಾರು ಲತಾ ನೇತೃತ್ವದಲ್ಲಿ ಸಿಎಂ ಮುಂದೆ ಶರಣಾಗತಿಯಾಗಿದ್ದರು. ಶರಣಾದ ನಕ್ಸಲರ ವಿರುದ್ಧ ಹಲವು ಪ್ರಕರಣಗಳು ಇದ್ದು, ಸದ್ಯ ಶರಣಾಗರ ನಕ್ಸಲರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಜನವರಿ 8ರಂದು 6 ಮಂದಿ ನಕ್ಸಲರು ಶರಣಾಗತರಾಗಿದ್ರು ಆದರೆ ರವೀಂದ್ರ ಅವರ ಸುಳಿವು ಮಾತ್ರ ಇರಲಿಲ್ಲ. ಹೀಗಾಗಿ ರವೀಂದ್ರ ಅವರನ್ನು ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿಯೂ ರವಿ ಸಂಪರ್ಕಕ್ಕೆ ಹರಸಾಹಸ ಪಟ್ಟಿತ್ತು. ಕೊನೆಗೆ ರಾಜ್ಯ ಸರ್ಕಾರದ ನಕ್ಸಲ್ ಶರಣಾಗತಿ ಪ್ಯಾಕೇಜ್ ಒಪ್ಪಿ ಶರಣಾಗಲು ರವೀಂದ್ರ ನಿರ್ಧರಿಸಿದರು. ಕೆಲ ದಿನಗಳ ಹಿಂದೆ ಶೃಂಗೇರಿ ಭಾಗದ ಅರಣ್ಯ ಪ್ರದೇಶದ ಸಮೀಪದ ನಿವಾಸಿಯೊಬ್ಬರ ಸಂಪರ್ಕ ಮಾಡಿ ದಿನಸಿ ಪಡೆದು, ಶರಣಾಗುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು. ಜಿಲ್ಲಾಡಳಿತಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದು ಅದರಂತೆ ಶರಣಾಗತಿ ಪ್ರಕ್ರಿಯೆ ನಡೆದಿದ್ದು, ಶೃಂಗೇರಿಯಿಂದ 4 ಕಿಲೋ ಮೀಟರ್ ದೂರದಲ್ಲಿರೋ ನೆಮ್ಮಾರ್ ಫಾರೆಸ್ಟ್‌ನ ಐಬಿಯಲ್ಲಿ ಪೊಲೀಸರ ಮುಂದೆ ನಕ್ಸಲ್ ರವೀಂದ್ರ ಶರಣಾಗಿದ್ದಾರೆ.
ಸದ್ಯ ಶರಣಾಗಿರೋ ನಕ್ಸಲ್ ರವೀಂದ್ರ ಒಟ್ಟು 26 ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಕರ್ನಾಟಕದಲ್ಲಿ 17, ಕೇರಳದಲ್ಲಿ 9 ಕೇಸ್ ರವೀಂದ್ರ ಮೇಲೆ ದಾಖಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 14 ಪ್ರಕರಣಗಳು ದಾಖಲಾಗಿವೆ.
ಸದ್ಯ ಕರ್ನಾಟಕದಲ್ಲಿ ನಕ್ಸಲ್ ಶರಣಾಗತಿ ಆಪರೇಷನ್ ಮುಕ್ತಾಯಗೊಂಡಿದ್ದು, ನಕ್ಸಲ್ ಶರಣಾಗತಿ ಸಂಬಂಧ ಕಾರ್ಯ ನಿರ್ವಹಿಸಿದ್ದ 22 ಪೊಲೀಸ್ ಸಿಬ್ಬಂದಿಗೆ ಸಿಎಂ ಸಿದ್ದರಾಮಯ್ಯ ಪದಕ ಘೋಷಣೆ ಮಾಡಿದ್ದಾರೆ.