ಚಿಕ್ಕನಾಯಕನಹಳ್ಳಿ : ಮದುವೆಯಾದ ಒಂದೂವರೆ ವರ್ಷಕ್ಕೆ ಗೃಹಿಣಿ ಸಾವು | ಗಂಡನ ಮನೆಯವರೇ ಸಾಯಿಸಿದ್ರಾ..?

ಮೃತ ಗೃಹಿಣಿ ಕಲಾವತಿ (28)
ಮೃತ ಗೃಹಿಣಿ ಕಲಾವತಿ (28)
ತುಮಕೂರು

ಚಿಕ್ಕನಾಯಕನಹಳ್ಳಿ:

ಪ್ರೀತಿ ಮಾಯೆ ಹುಷಾರು.. ಈ ಮಾತು ಸುಳ್ಳಲ್ಲ ಅನ್ನೋದು ಮತ್ತೆ ಮತ್ತೆ ಸಾಬೀತು ಆಗ್ತಾನೆ ಇದೆ. ಪ್ರೀತಿಸಿ ಮದುವೆಯಾದ ಒಂದೂವರೆ ವರ್ಷಕ್ಕೆ ಗೃಹಿಣಿ ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ಈ ದಾರುಣ ಘಟನೆಗೆ ಸಾಕ್ಷಿಯಾಗಿದ್ದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಮುದ್ದೇನಹಳ್ಳಿ. 28 ವರ್ಷದ ಕಲಾವತಿ ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಗಂಡನ ಮನೆಯವರೇ ಅವಳನ್ನು ಕೊಲೆ ಮಾಡಿದ್ದಾರೆ ಎಂದು ಆಕೆಯ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

ತುರುವೇಕೆರೆ ಮೂಲದ ಕಲಾವತಿ ಹಾಗೂ ಚಿಕ್ಕನಾಯಕನಹಳ್ಳಿಯ ಮುದ್ದೇನಹಳ್ಳಿಯ ನರಸಿಂಹಮೂರ್ತಿ ಪರಸ್ಪರ ಪ್ರೀತಿಸುತ್ತಿದ್ದು, ಕಳೆದ ಒಂದೂವರೆ ಹಿಂದಷ್ಟೇ ಮದುವೆ ಆಗಿದ್ದರು. ವರದಕ್ಷಿಣೆಯಾಗಿ 80 ಸಾವಿರ ದುಡ್ಡು, ಒಂದು ಚೈನ್‌, ಉಂಗುರ, ಬ್ರೇಸ್‌ಲೈಟ್‌ನನ್ನು ಕೂಡ ನರಸಿಂಹಮೂರ್ತಿಗೆ ಕೊಡಲಾಗಿತ್ತು. ಸಾಲದಕ್ಕೆ ಮಗಳಿಗೆ ಒಡವೆಯನ್ನು ತವರು ಮನೆಯವರು ಕೊಟ್ಟಿದ್ದಾರೆ.

ಕಲಾವತಿಗೆ ತವರು ಮನೆಯಿಂದ ಕೊಟ್ಟಿದ್ದ ಒಡವೆಯನ್ನು ಯಾರೋ ತೆಗೆದುಕೊಂಡಿದ್ದರಂತೆ. ಈ ಬಗ್ಗೆ ಮಾತನಾಡುತ್ತಿದ್ದಂತೆ ಪಾಪಿ ಗಂಡ ನರಸಿಂಹ ಮೂರ್ತಿ, ನಾದಿನಿ ರೂಪ ಹಾಗೂ ಮೋಹನ್‌ ಸೇರಿ ಕಲಾವತಿಗೆ ಸಿಕ್ಕಾಪಟ್ಟೆ ಹೊಡೆದಿದ್ದಾರೆ. ಈ ಬಗ್ಗೆ ಕಳೆದ ಫೆಬ್ರವರಿ 26 ರಂದು ಪೊಲೀಸ್‌ ಎಮರ್ಜೆನ್ಸಿ 112ಗೆ ಕರೆ ಮಾಡಿ ಗಂಡನ ಮನೆಯವರು ಕೊಡ್ತಾ ಇರೋ ಹಿಂಸೆ ಬಗ್ಗೆ ಕಲಾವತಿ ದೂರು ನೀಡಿದ್ದಾರೆ. 112ಗೆ ಕರೆ ಮಾಡಿರೋ ರೆಕಾರ್ಡ್‌ ಇಲಾಖೆಯ ಬಳಿ ಇದ್ದು ಆ ಆಡಿಯೋ ಸಿಕ್ಕರೆ ಗಂಡನ ಮನೆಯವರ ಕಿರಾತಕ ಬುದ್ದಿ ಬಯಲಾಗುತ್ತೆ ಎಂದು ಯುವತಿ ಕಲಾವತಿಯ ಅಣ್ಣ ಆಕ್ರೋಶ ಹೊರಹಾಕಿದ್ದಾರೆ.

ಹಲ್ಲೆಯಿಂದ ಕಲಾವತಿಯ ತಲೆಯ ಭಾಗಕ್ಕೆ ತುಂಬಾ ಪೆಟ್ಟಾಗಿದ್ದು ಅಂದಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ನಿಮಾನ್ಸ್‌, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತೋರಿಸಲಾಗಿತ್ತು. ತಲೆಗೆ ಏಟಾಗಿದ್ದರಿಂದ ದೇಹದ ಒಂದು ಭಾಗ ಸ್ವಾಧೀನ ಕಳೆದುಕೊಂಡಿದ್ದು, ಅಪರೇಷನ್‌ ಮಾಡಬೇಕೆಂದು ಡಾಕ್ಟರ್‌ ತಿಳಿಸಿದ್ದರು. ಅಪರೇಷನ್‌ಗೆ ಸಾಕಷ್ಟು ಹಣ ಬೇಕಾಗಿತ್ತು ಅಲ್ಲದೇ ಜೀವಕ್ಕೆ ಗ್ಯಾರಂಟಿ ಕೊಡಲಾಗಲ್ಲ ಎಂದು ವೈದ್ಯರು ತಿಳಿಸಿದ್ದಕ್ಕೆ ಕಲಾವತಿಯನ್ನು ಬೇರೆ ಕಡೆ ಚಿಕಿತ್ಸೆ ಕೊಡಿಸಲು ಆಕೆಯ ಮನೆಯವರು ಕರೆದುಕೊಂಡು ಹೋಗಿದ್ದರು, ಆದರೆ ಮೂರು ದಿನದ ಹಿಂದೆ ಆಕೆ ತುಂಬಾ ಸುಸ್ತಾಗಿದ್ದರಿಂದ ಗ್ಲುಕೋಸ್‌ ಹಾಕಿಸಲು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಗ್ಲೂಕೋಸ್‌ ಅರ್ಧ ಬಾಟಲ್‌ ಹೋಗುತ್ತಿದ್ದಂತೆ ಕಲಾವತಿ ಉಸಿರು ನಿಲ್ಲಿಸಿದ್ದಾಳೆ. ಕಲಾವತಿ ನಿಧನದಿಂದ ಆಕೆಯ ತಾಯಿ, ಅಣ್ಣನ ಆಕ್ರಂದನ ಮಾತ್ರ ಮುಗಿಲು ಮುಟ್ಟಿತ್ತು.

ಬಡವರಾಗಿದ್ದರು ರಾಣಿಯಂತೆ ಮಗಳನ್ನು ಬೆಳೆಸಿದ್ದ ತಾಯಿಗೆ ಈಗ ಮಗಳಿಲ್ಲ ಅನ್ನೋದು ಅರಗಿಸಿಕೊಳ್ಳಲು ಆಗ್ತಾ ಇಲ್ಲ. ಮಗಳ ಇವತ್ತಿನ ಸ್ಥಿತಿಗೆ ಗಂಡನ ಮನೆಯವರ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಮೃತಳ ತಾಯಿ ಕಣ್ಣೀರಾಕುತ್ತಿದ್ದಾರೆ. ಆರೋಪಿಗಳಾದ ಗಂಡ ನರಸಿಂಹಮೂರ್ತಿ, ನಾದಿನಿ ರೂಪ, ಮೋಹನ್‌ ಎಸ್ಕೇಪ್‌ ಆಗಿದ್ದಾರೆ. ಸದ್ಯ ಈ ಸಂಬಂಧ ಚಿಕ್ಕನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಆರೋಪಿಗಳಿಗಾಗಿ ಹುಡುಕಾಟ ಪೊಲೀಸರು ನಡೆಸುತ್ತಿದ್ದಾರೆ.

 

Author:

share
No Reviews