ಚಿಕ್ಕಬಳ್ಳಾಪುರ :
ಚಿಕ್ಕಬಳ್ಳಾಪುರ ತಾಲೂಕಿನ ಅರಸನಹಳ್ಳಿ ಗ್ರಾಮದ ಕೊದಂಡಪ್ಪ ಎಂಬಾತ ಕಳೆದ ಮೂರು ದಿನಗಳ ಹಿಂದೆಯಷ್ಟೇ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಶೋಕ ಮಡುಗಟ್ಟಿತ್ತು. ಮನೆ ಯಜಮಾನನನ್ನು ಕಳೆದುಕೊಂಡು ಕುಟುಂಬ ಕಂಗಾಲಾಗಿತ್ತು. ಈ ಮಧ್ಯೆ ಕುಟುಂಬಸ್ಥರು ಸಾಲ ಸೋಲ ಮಾಡಿ ಅಂತ್ಯಸಂಸ್ಕಾರಕ್ಕೆ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಇನ್ನೇನು ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಬೇಕು ಅನ್ನೋ ಅಷ್ಟರಲ್ಲಿ ಜಮೀನಿನ ವಿವಾದ ಎದ್ದಿದ್ದು ಮೃತದೇಹಕ್ಕೆ ಮುಕ್ತಿಯೇ ಸಿಗದಂತೆ ಮಾಡಿದ್ದಾರೆ.
ಮೃತ ವ್ಯಕ್ತಿಯ ತಾಯಿ ಹಾಗೂ ತಮ್ಮನ ನಡುವೆ ಎರಡು ಎಕರೆ ಜಮೀನು ವಿಚಾರವಾಗಿ ತಗಾದೆ ಎದ್ದಿತ್ತು. ಹೀಗಾಗಿ ಮೃತದೇಹವನ್ನು ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇತ್ತ ಅದೇ ಜಮೀನಿನಲ್ಲಿ ಕೊದಂಡಪ್ಪ ಅವರ ಅಂತ್ಯಸಂಸ್ಕಾರ ಮಾಡುವುದಾಗಿ ಕುಟುಂಬಸ್ಥರು ಹಠ ಹಿಡಿದಿದ್ದಾರೆ. ಕುಟುಂಬಸ್ಥರ ಹಗ್ಗಾ-ಜಗ್ಗಾಟದ ಮಧ್ಯೆ ಮೃತದೇಹಕ್ಕೆ ಮುಕ್ತಿ ಸಿಗದೇ, ಕುಟುಂಬಸ್ಥರು ಕಳೆದ ಮೂರು ದಿನಗಳಿಂದ ಮೃತದೇಹವನ್ನು ಮನೆ ಬಳಿಯೇ ಇಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸ್ತಿದ್ದಾರೆ.
ಇನ್ನು ಪ್ರತಿಭಟನೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ, ಕುಟುಂಬಸ್ಥರ ಮನವೊಲಿಕೆ ಮಾಡಲು ಮುಂದಾದರು. ಆದರೆ ಕುಟುಂಬಸ್ಥರ ಮನಸ್ಥಿತಿ ಮಾತ್ರ ಬದಲಾಗದೇ ಇರೋದರಿಂದ ಮೃತದೇಹಕ್ಕೆ ಮುಕ್ತಿ ಸಿಗೋ ಕಾರ್ಯ ಮಾತ್ರ ವಿಫಲವಾಗಿದೆ. ಮೂರು ದಿನಗಳು ಕಳೆದರು ಕರಗದ ಕುಟುಂಬಸ್ಥರ ಮನಸ್ಥಿತಿಗೆ ಗ್ರಾಮಸ್ಥರೇ ಬೇಸತ್ತಿದ್ದಾರೆ. ಜಮೀನು ವಿವಾದ ಬಗೆಹರಿದು ಅಂತ್ಯಸಂಸ್ಕಾರಕ್ಕೆ ಮುಕ್ತಿ ಸಿಗುತ್ತಾ. ಇಲ್ವಾ ಎಂದು ಕಾದು ನೋಡಬೇಕಿದೆ