CHIKKABALLAPURA : ಟೆಂಪೋ-ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೋಶೆಟ್ಟಿಹಳ್ಳಿ ಬಳಿ ಮುಂಜಾನೆ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಮಂಚೇನಹಳ್ಳಿ ತಾಲ್ಲೂಕಿನ ಗುಂಡ್ಲಹಳ್ಳಿ ಗ್ರಾಮದ 25 ವರ್ಷದ ಕೃಷ್ಣ ಹಾಗೂ ಬುದ್ದಿವಂತನಹಳ್ಳಿ ಗ್ರಾಮದ 24 ವರ್ಷದ ಪ್ರಕಾಶ್ ಎಂದು ಗುರುತಿಸಲಾಗಿದೆ. ಇಬ್ಬರೂ ಚಿಕ್ಕಬಳ್ಳಾಪುರದ ಟೈಟಾನ್ ಕಂಪನಿಗೆ ಕೆಲಸಕ್ಕೆ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಪೋಶೆಟ್ಟಿಹಳ್ಳಿ ಬಳಿ ಎದುರಿನಿಂದ ಬಂದ ಟೆಂಪೋವು ಬೈಕ್‌ಗೆ ಗುದ್ದಿದ ಪರಿಣಾಮ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಟೆಂಪೋ ಚಾಲಕನ ಅಜಾಗರೂಕತೆ ಹಾಗೂ ಅತಿವೇಗವೇ ಈ ದುರಂತಕ್ಕೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.