ಚಿಕ್ಕಬಳ್ಳಾಪುರ :
ಮಹಿಳೆಯೋರ್ವರ ಮೇಲೆ ಸಂಬಂಧಿಕರು ಹಲ್ಲೆ ಮಾಡಿರುವಂತ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ಡ ಪೈಲಾಗುರ್ಕಿ ಗ್ರಾಮ ಪಂಚಾಯ್ತಿಯ ಮಾರಾಗನಹಳ್ಳಿಯಲ್ಲಿ ನಡೆದಿದೆ. ನಾರಾಯಣಮ್ಮ ಎಂಬುವರು ಹಲ್ಲೆಗೊಳಗಾದವರಾಗಿದ್ದಾರೆ. ಸದ್ಯ ಮಹಿಳೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಮಹಿಳೆಯು ಗಂಡ ಮಗಳಿಂದ ದೂರವಾಗಿದ್ದು, ಏಕಾಂಗಿಯಾಗಿ ಮಾರಾಗನಹಳ್ಳಿ ಗ್ರಾಮದಲ್ಲಿ ಬದುಕು ನಡೆಸುತ್ತಿದ್ದಾರೆ. ಮೊನ್ನೆ ರೇಷನ್ ತರಲೆಂದು ರೆಡ್ಡಿಗೊಲ್ಲವಾರಹಳ್ಳಿಗೆ ಹೊರಟಿದ್ದಾಗ ದಾರಿಯ ಮಧ್ಯೆ ಬಾವನ ಮಗ ರಾಜಶೇಖರ್, ಅರ್ಚನಾ, ಭಾಗ್ಯಮ್ಮ ಅವಾಚ್ಯ ಶಬ್ದಗಳಿಂದ ನಿಂದಿಸಿ, ದೊಣ್ಣೆಯಿಂದ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ನಾರಾಯಣಮ್ಮ ಮೇಲೆ ಸುಮಾರು 30 ವರ್ಷಗಳಿಂದಲೂ ಆಕೆಯ ಬಾವನ ಮಗ ರಾಜಶೇಖರ್, ಅರ್ಚನಾ, ಭಾಗ್ಯಮ್ಮ ಎಂಬುವವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ಕೊಡ್ತಾನೆ ಬಂದಿದ್ದು, ಈ ಸಂಬಂಧ ಹಲವು ಬಾರಿ ಪೊಲೀಸ್ ಠಾಣೆಗೂ ದೂರು ನೀಡಿದ್ದು ಪೊಲೀಸರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಲಾಗಿತ್ತಂತೆ, ಆದರೆ ಇದೀಗ ನಾರಾಯಣಮ್ಮ ಮೇಲೆ ಏಕಾಏಕಿ ಬರ್ಬರವಾಗಿ ಹಲ್ಲೆ ನಡೆಸಲಾಗಿದೆ. ಅಲ್ಲದೇ ಹಲ್ಲೆ ನಡೆದಿರುವುದು ಗಂಡನ ಕುಮ್ಮಕ್ಕಿನಿಂದಲೇ ಅಂತಾ ಮಹಿಳೆ ನಾರಾಯಣಮ್ಮ ಆರೋಪ ಮಾಡ್ತಿದ್ದಾರೆ. ಸದ್ಯ ಈ ಸಂಬಂಧ ಪೇರೆಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.