ಚಿಕ್ಕಬಳ್ಳಾಪುರ : 85 ವರ್ಷದ ಗಂಡು ಮತ್ತು 80 ವರ್ಷದ ಹೆಣ್ಣು ಮರು ಮದುವೆಯಾಗುವ ಮೂಲಕ ವೃದ್ಧ ಜೋಡಿಯೊಂದು ಮತ್ತೆ ನವ ವಸಂತಕ್ಕೆ ಕಾಲಿಟ್ಟರು. ಹಿರಿ ಜೀವಿಗಳ ಮದುವೆಯಲ್ಲಿ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳ ಸಂಭ್ರಮಕ್ಕೆ ಪಾರವೇ ಇಲ್ಲ, ಒಂದ್ಕಡೆ ಷಷ್ಠಿಪೂರ್ತಿ ಮಾಡಿಕೊಂಡೆವು ಅಂತಾ ಆನಂದಭಾಷ್ಪ ಸುರಿಸಿದ ವೃದ್ಧ ಜೀವಿಗಳು. ಮತ್ತೊಂದು ಕಡೆ ಅಜ್ಜ- ಅಜ್ಜಿಯನ್ನು ಮದುವೆ ಗೆಟಪ್ನಲ್ಲಿ ಇರೋದನ್ನು ಕಣ್ತುಂಬಿಕೊಂಡು ನಮಗೂ ಈ ಭಾಗ್ಯ ಸಿಗಲಿ ಅಂತಾ ಕೋರಿಕೊಳ್ತಿರೋ ಮಕ್ಕಳು. ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಬುಕ್ಕನಹಳ್ಳಿಯಲ್ಲಿ.
ಬುಕ್ಕನಹಳ್ಳಿ ನಿವಾಸಿಗಳಾದ 85 ವರ್ಷದ ವೆಂಕಟರೆಡ್ಡಿ ಮತ್ತು ಅವರ ಧರ್ಮಪತ್ನಿ 80 ವರ್ಷದ ವೆಂಕಟಮ್ಮ ತಮ್ಮ 60 ನೇ ವಿವಾಹ ವಾರ್ಷಿಕೋತ್ಸವದಂದು ಮರು ಮದುವೆಯಾಗುವ ಮೂಲಕ ಮತ್ತೆ ಹಳೇ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಹಾರ ಬದಲಿಸುವುದರಿಂದ ಹಿಡಿದು ಎಲ್ಲಾ ವಿವಾಹ ವಿಧಿವಿಧಾನಗಳನ್ನು ಕುಟುಂಬದ ಸಮ್ಮುಖದಲ್ಲಿ ಅತ್ಯಂತ ಸಂಭ್ರಮದಿಂದ ನಡೆಸಿದ್ದಾರೆ. ದಂಪತಿಗಳು ತಮ್ಮ ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಸೇರಿದಂತೆ 52 ಜನರ ಸದಸ್ಯರ ಕುಟುಂಬ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮ ಆಚರಿಸಿದ್ದು, ಈ ವಿಶಿಷ್ಟ ವಿವಾಹವು ಗ್ರಾಮದ ಜನತೆಯನ್ನು ಮತ್ತಷ್ಟು ಆಕರ್ಷಸಿತ್ತು.
ಇನ್ನೂ 60 ನೇ ವಿವಾಹ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಯೋಜಿಸಲಾಗಿದ್ದು. ಈ ವೇಳೆ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ನೂರಾರು ಸಂಖ್ಯೆಯಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಹಿರಿಯ ಜೀವಿಗಳಿಂದ ಆಶೀರ್ವಾದ ಪಡೆದುಕೊಂಡರು, ಇಡೀ ಗ್ರಾಮದ ಜನರಿಗೆ ಮದುವೆ ಊಟ ಬಡಿಸಿ ಮನೆ ಮಂದಿ ಖುಷಿ ಪಟ್ಟರು.
ಒಟ್ಟಾರೇ ಸಂಸಾರದಲ್ಲಿ ಈಜಾಡಿ, ತಿಂಗಳಲ್ಲೇ ಮದುವೆ ಮುರಿದುಕೊಳ್ಳುತ್ತಿರುವ ಯುವಜನತೆ ನಾಚುವಂತೆ, ಈ ಜೋಡಿಯು 60 ವರ್ಷ ಕೂಡಿಬಾಳಿ ಮರು ಮದುವೆ ಮಾಡಿಕೊಂಡು ನೂರಾರು ದಂಪತಿಗಳಿಗೆ ಮಾದರಿಯಾಗಿದ್ದಾರೆ ಎಂದರೇ ತಪ್ಪಗಲಾರದು.