ಚಿಕ್ಕಬಳ್ಳಾಪುರ :
ಚಿಕ್ಕಬಳ್ಳಾಪುರ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಒಳಜಗಳ ದಿನೇ ದಿನೇ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಹಿರಿಯ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಅನ್ನೋ ಮಾತಿದೆ. ಇದರ ನಡುವೆ ಒಂದು ಕಡೆ ಶಾಸಕ ಪ್ರದೀಪ್ ಈಶ್ವರ್ ಜನಸಂಪರ್ಕ ಸಭೆಗಳನ್ನು ಮಾಡ್ತಾ ಇದ್ದರೆ, ಮತ್ತೊಂದು ಕಡೆ ಇನ್ನೊಂದು ಗುಂಪು ತೋಟದ ಮನೆಯಲ್ಲಿ ಮೀಟಿಂಗ್ ಮಾಡುವ ಮೂಲಕ ಪ್ರದೀಪ್ ಈಶ್ವರ್ ವಿರುದ್ಧ ಅಸಮಾದಾನ ಹೊರಹಾಕ್ತಿದಾರೆ ಎನ್ನಲಾಗ್ತಿದೆ.
ಚಿಕ್ಕಬಳ್ಳಾಪುರದ ಕಾಂಗ್ರೆಸ್ ಅಕ್ಷರಶಃ ಇಬ್ಬಾಗವಾಗ್ತಿದೀಯ ಅನ್ನೋ ಮಾತು ಕೇಳಿ ಬರ್ತಿದೆ. ಇದಕ್ಕೆ ಪುಷ್ಟಿ ಎಂಬಂತೆ ಮುಖಂಡರುಗಳು ಪ್ರತ್ಯೇಕ ಸಭೆಗಳನ್ನು ಮಾಡುತ್ತ ತಮ್ಮ ಅಸ್ತಿತ್ವದ ಹಕ್ಕಿಗಾಗಿ ಹೋರಾಟಕ್ಕೆ ಇಳಿದಿದ್ದಾರೆ. ಮಂಗಳವಾರ ಸಂಜೆ ಕಾರಹಳ್ಳಿ ಸಮೀಪದ ಖಾಸಗಿ ತೋಟದ ಮನೆಯಲ್ಲಿ ಮಾಜಿ ಶಾಸಕ ಎಸ್ ಎಂ ಮುನಿಯಪ್ಪ, ನಂದಿ ಆಂಜಿನಪ್ಪ, ಭರಣಿ ವೆಂಕಟೇಶ್, ಮಂಚೇನಹಳ್ಳಿ ಪ್ರಕಾಶ್, ಹಿರಿಯ ವಕೀಲ ನಾರಾಯಣಸ್ವಾಮಿ ಸೇರಿದಂತೆ ನೂರೈವತ್ತಕ್ಕೂ ಹೆಚ್ಚು ಹಿರಿಯ ಮುಖಂಡರು ಸಭೆ ನಡೆಸಿ ಶಾಸಕರ ವಿರುದ್ಧ ಹೈಕಮಾಂಡ್ ಗೆ ದೂರು ಸಲ್ಲಿಸುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಮಂಡಳಿ ನಿಗಮಗಳ ಶಿಫಾರಸುಗಳಲ್ಲಿ ಹಿರಿಯರಿಗೆ ಅನ್ಯಾಯವಾಗಿದೆ. ಸ್ಥಳೀಯ ಮಟ್ಟದ ಸಭೆ ಸಮಾರಂಭಗಳಲ್ಲಿ ಹಿರಿಯರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಅಸಮಾಧಾನ ಕೇಳಿ ಬಂದಿದೆ ಎನ್ನಲಾಗ್ತಿದೆ. ಈ ನಡುವೆ ಮಾಜಿ ಶಾಸಕ ಮುನಿಯಪ್ಪ ಗ್ಯಾರಂಟಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಪುತ್ರ ಜಗದೀಶ್ ಸಹ ಬಹಿರಂಗವಾಗಿ ಶಾಸಕರ ವಿರುದ್ಧ ಪ್ರತಿಭಟಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಇಂದು ಮುಂಜಾನೆ ಶಾಸಕ ಪ್ರದೀಪ್ ಈಶ್ವರ್ ಹಾಗೂ ಹಿರಿಯ ಮುಖಂಡರ ಬೆಂಬಲಿಗರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ ಎನ್ನಲಾಗ್ತಿದೆ. ಮುಂದೆ ಚಿಕ್ಕಬಳ್ಳಾಪುರದ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಕೋಲಾಹಲ ಯಾವ ಮಟ್ಟಕ್ಕೆ ತಲುಪುತ್ತದೆ. ಹಿರಿಯ ನಾಯಕರ ಬಂಡಾಯದ ಕೂಗು ಶಮನವಾಗುತ್ತಾ, ಇಲ್ಲಾ ಕಾಂಗ್ರೆಸ್ ಇಬ್ಬಾಗವಾಗಿ ಹೋಗುತ್ತಾ ಎಂದು ಕಾದು ನೋಡಬೇಕಿದೆ.