ಚಿಕ್ಕಬಳ್ಳಾಪುರ :
ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಿದ್ದೇ ಆಗಿದ್ದು, ದೇವನಹಳ್ಳಿ ಮಾತ್ರವಲ್ಲದೇ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಭೂಮಿ ಬೆಲೆ ಗಗನಕ್ಕೇರಿದ್ದು, ನುಂಗಣ್ಣರ ಕಾಟವೂ ಹೆಚ್ಚಾಗ್ತಾ ಇದೆ. ಇನ್ನು ಬಡ ರೈತರಂಥೂ ಕಷ್ಟ ಅಂತ ಸಾಲ ಮಾಡಲು ಹೋದರೆ, ಚಿನ್ನಕ್ಕಿಂತ ಜಮೀನು ಪತ್ರಗಳನ್ನೇ ಹೆಚ್ಚಾಗಿ ಕೇಳ್ತಿದ್ದು, ಅಪ್ಪಿ ತಪ್ಪಿ ಜಮೀನು ಪತ್ರ ನೀಡಿದರೆ ಅದರ ಕತೆ ಮುಗಿತು ಎಂಬಂತ ಸ್ಥಿತಿ ನಿರ್ಮಾಣವಾಗಿದೆ.
ಶಿಡ್ಲಘಟ್ಟ ತಾಲೂಕಿನ ಎಸ್. ದೇವಗಾನಹಳ್ಳಿಯ ವೆಂಕಟರಾಯಪ್ಪ ಎಂಬುವವರು ಮಗಳ ಮದುವೆಗೆಂದು ಚಿಕ್ಕಬಳ್ಳಾಪುರ ತಾಲೂಕಿನ ಡಿ.ಹೊಸೂರಿನ ನಾರಾಯಣಸ್ವಾಮಿ ಎಂಬುವರಿಗೆ ಎರಡು ಎಕರೆ ಜಮೀನನ್ನು ಅಡ ಇಟ್ಟು ತಿಂಗಳಿಗೆ ಎರಡು ರೂಪಾಯಿ ಬಡ್ಡಿಯಂತೆ ೩ ಲಕ್ಷ ಹಣವನ್ನು ಸಾಲ ಪಡೆದಿದ್ರಂತೆ, ಇನ್ನು ಹಣ ಪಡೆದ ಬಗ್ಗೆ ಮತ್ತು ಬಡ್ಡಿ ಅಸಲು ವಾಪಸ್ ನೀಡಿದಾಗ ಭೂಮಿ ವಾಪಸ್ ನೀಡುವ ಬಗ್ಗೆ ಎದುರು ಖರಾರು ಪತ್ರವನ್ನ ಒಪ್ಪಿ ಸಹಿ ಮಾಡಿದ್ದಾರೆ, ಆದ್ರೆ ಇತ್ತೀಚೆಗೆ ಜಮೀನು ಮಾಲೀಕರಿಗೆ ತಿಳಿಯದೇ ನಾರಾಯಣಸ್ವಾಮಿ ಮಗ ಅಶೋಕ್ ಎಂಬಾತ ಅಡ ಇಟ್ಟ ಭೂಮಿಯನ್ನು ಕಂದಾಯ ಅಧಿಕಾರಿಗಳಿಂದ ತನ್ನ ಹೆಸರಿಗೆ ಮಾಡಿಕೊಂಡು ಮಾರಾಟ ಮಾಡಿಬಿಟ್ಟಿದ್ದಾನಂತೆ.
ಸರಿಯಾಗಿ ಬಡ್ಡಿ ಕಟ್ತಾ ಇದ್ದು, ಎರಡು ಲಕ್ಷ ರೂಪಾಯಿ ಅಸಲನ್ನು ಕೂಡ ವಾಪಸ್ ನೀಡಿದ್ದು, ಇನ್ನು ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಮಾತ್ರ ಸಾಲ ಬಾಕಿ ಇತ್ತಂತೆ, ಆದರೆ ವೆಂಕಟರಾಯಪ್ಪ ಮತ್ತು ನಾರಾಯಣಸ್ವಾಮಿ ಇಬ್ಬರೂ ತೀರಿಹೋಗಿದ್ದು, ಇದೀಗ ವೆಂಕಟರಾಯಪ್ಪ ಕುಟುಂಬಕ್ಕೇ ತಿಳಿಯದೇ ನಾರಾಯಣಸ್ವಾಮಿಯ ಮಗ ಈ ರೀತಿ ವಂಚಿಸಿದ್ದಾನಂತೆ.
ಇನ್ನು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ತಮ್ಮ ಗಮನಕ್ಕೆ ಬಾರದೇ ಬೇರಯವರಿಗೆ ಮಾರಿದ್ದಾರೆ ಎಂದು ವೆಂಕಟರಾಯಪ್ಪನ ಮಕ್ಕಳು ಆರೋಪಿಸ್ತಾ ಇದಾರೆ. ಇನ್ನು ಈ ವಿಚಾರದ ಬಗ್ಗೆ ಕೇಳಲು ಹೊಸೂರು ಗ್ರಾಮಕ್ಕೆ ಹೋದಾಗ ಅಶೋಕ್ ಮತ್ತು ಆತನ ತಾಯಿ ನಾರಾಯಣಮ್ಮ ಎಂಬುವರು ಮನೆಗೆ ಬೀಗ ಜಡಿದು ಪರಾರಿಯಾಗಿದ್ದು, ಅಶೋಕ್ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇನ್ನು ಕರಾರು ಪತ್ರ ಸೇರಿದಂತೆ ಬಡ್ಡಿ ಅಸಲು ಪಾವತಿಸಿರೋ ಬಗ್ಗೆ ನಮ್ಮತ್ರ ದಾಖಲೆಗಳಿವೆ, ಆದರೂ ಕಂದಾಯ ಅಧಿಕಾರಿಗಳ ಕುಮ್ಮಕ್ಕಿನೊಂದಿಗೆ ತಮ್ಮ ಜಮೀನು ಮಾರಾಟ ಮಾಡಿದ್ದು, ನ್ಯಾಯ ದೊರಕಿಸಿಕೊಡಿ ಎಂದು ನೊಂದ ವೆಂಕಟರಾಯಪ್ಪನ ಮಕ್ಕಳು ಅಶೋಕನ ಮನೆ ಮುಂದೆ ಧರಣಿ ಕುಳಿತಿದ್ದಾರೆ.
ಇನ್ನು ವೆಂಕಟರಾಯಪ್ಪನ ಮಕ್ಕಳು ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದು, ಈ ದೂರನ್ನು ಶಿಡ್ಲಘಟ್ಟ ವೃತ್ತ ನಿರೀಕ್ಷಕರಿಗೆ ಎಸ್ಪಿಯವರು ವರ್ಗಾವಣೆ ಮಾಡಿದ್ದು, ಪೊಲೀಸರಿಂದಾದ್ರೂ ಈ ಕುಟುಂಬಕ್ಕೇ ನ್ಯಾಯ ಸಿಗುತ್ತಾ ಕಾದು ನೋಡ್ಬೇಕಿದೆ. ಒಟ್ಟಿನಲ್ಲಿ ಭೂಮಿ ಬೆಲೆ ಹೆಚ್ಚಾದಂತೆ ಜನರಲ್ಲಿ ಮಾನವೀಯತೆ ಅನ್ನೋದು ದೂರವಾಗ್ತಿದ್ದು, ಹಣಕ್ಕೋಸ್ಕರ ಯಾರನ್ನಾ ಬೇಕಾದರೂ ಯಾಮಾರಿಸ್ತಿರೋದು ಮಾತ್ರ ವಿಪರ್ಯಾಸ.