ಚಿಕ್ಕಬಳ್ಳಾಪುರ :
ಬಯಲು ಸೀಮೆಯಲ್ಲಿ ಕೋಳಿ ಪಂದ್ಯ, ಜೂಜಾಟ ಅಂದರೆ ಫುಲ್ ಫೇಮಸ್. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಕೋಳಿ ಪಂದ್ಯಗಳು ಆಡೋದು ನಿಷೇಧವಿದ್ದರೂ ಕೂಡ ಜನರು ಮಾತ್ರ ಡೋಂಟ್ ಕೇರ್ ಅಂತಾ ಬೆಟ್ಟಿಂಗ್ ಕಟ್ಟಿ ಕೋಳಿ ಪಂದ್ಯಗಳನ್ನು ಆಡ್ತಾರೆ. ಕೋಳಿ ಪಂದ್ಯದಲ್ಲಿ ಭಾಗಿಯಾದವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದರೂ ಕೂಡ ಪಂದ್ಯಗಳನ್ನು ಆಡೋದನ್ನು ಮಾತ್ರ ಜನ ನಿಲ್ಲಿಸ್ತಾ ಇಲ್ಲ. ಹೌದು ಇದೀಗ ಕೋಳಿ ಪಂದ್ಯದಲ್ಲಿ ಅಣ್ಣ- ತಮ್ಮಂದಿರು ಬಲಿಯಾಗಿರೋ ಧಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೋಳಿ ಪಂದ್ಯದ ವೇಳೆ ಸಹೋದರರು ಹಾಗೂ ಮತ್ತೊಂದು ಗುಂಪಿನ ನಡುವೆ ಗಲಾಟೆ ನಡೆದಿತ್ತು. ಗಲಾಟೆ ವಿಕೋಪಕ್ಕೆ ತಿರುಗಿದ್ದು ಅಣ್ಣ-ತಮ್ಮನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ, ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಗ್ರಾಮದಲ್ಲಿ ಎರಡು ಗುಂಪುಗಳು ನಡುವೆ ಕೋಳಿ ಪಂದ್ಯ ಗಲಾಟೆ ನಡೆದಿದೆ. ಮೂವರು ಚಾಕು ಇರಿತಕ್ಕೆ ಒಳಗಾಗಿದ್ದು, ಅಣ್ಣ-ತಮ್ಮ ಸಾವನ್ನಪ್ಪಿದರೆ, ಮತ್ತೋರ್ವ ಸಹೋದರನ ಸ್ಥಿತಿ ಚಿಂತಾಜನಕವಾಗಿದೆ. ಗ್ರಾಮದ ಪ್ರತಾಪ್, ಲಿಂಗಮಯ್ಯ ಎಂಬ ಸಹೋದರರು ಹಾಗೂ ಮತ್ತೊಂದು ಗುಂಪಿನ ನಡುವೆ ಕೋಳಿ ಜೂಜಾಟದ ವಿಚಾರಕ್ಕೆ ಗಲಾಟೆ ನಡೆದಿತ್ತು. ಗಲಾಟೆ ವಿಕೋಪಕ್ಕೆ ಕೋಳಿ ಪಂದ್ಯಕ್ಕೆ ಬಳಸುವ ಕತ್ತಿಯಿಂದ ಮೂವರಿಗೆ ತಿವಿಯಲಾಗಿದೆ. ಚಾಕು ಇರಿತದಿಂದ ಲಿಂಗಮಯ್ಯ, ಪ್ರತಾಪ್ ಸಾವನ್ನಪ್ಪಿದರೆ, ಗಲಾಟೆ ಬಿಡಿಸಲು ಬಂದ ಮತ್ತೋರ್ವ ಸಹೋದರ ಸಾಗರ್ ಸ್ಥಿತಿ ಚಿಂತಾಜನಕವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಜಾನ್, ಮಯಾಮ್ ರಾಜ್, ವಂಶಿ, ಸಾಯಿನಾಥ್ ಹಾಗೂ ದೇವರಾಜು ಎಂಬ ಆರೋಪಿಗಳು ಚಾಕು ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಇನ್ನು ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಲು ಹುಡುಕಾಟ ನಡೆಸುತ್ತಿದ್ದಾರೆ.
ಅದೇನೆ ಆಗಲಿ ಕೋಳಿ ಪಂದ್ಯಕ್ಕೆ ನಿಷೇಧ ಹೇರಿದ್ದರೂ ಕೂಡ ಪಂದ್ಯ ಆಡ್ತಾ ಇದ್ದು, ಗುಂಪುಗಳ ನಡುವೆ ಆದ ಮಾರಾಮಾರಿಗೆ ಇಬ್ಬರು ಬಲಿಯಾಗಿದ್ದು ದುರಂತವೇ ಸರಿ. ಮನೆಗೆ ಆಧಾರವಾದ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು.