ಚಿಕ್ಕಬಳ್ಳಾಪುರ :
ಖಾಸಗಿ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ, ಕಾರು ಹೊತ್ತಿ ಉರಿದು ಇಬ್ಬರು ಸಜೀವಗೊಂಡ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಗೋಪಲ್ಲಿ ಗ್ರಾಮದ ಬಳಿ ನಡೆದಿದೆ. ಇಂದು ಬೆಳಗ್ಗೆ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು ಕಾರು ಧಗಧಗನೇ ಹೊತ್ತಿ ಉರಿದಿದೆ, ಭೀಕರ ಅಪಘಾತದಿಂದ ಕಾರಿನಲ್ಲಿದ್ದ ಇಬ್ಬರು ಸಜೀವ ದಹನಗೊಂಡರೆ, ಮೂವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿಂತಾಮಣಿಯಿಂದ ಮದನಪಲ್ಲಿ ಮಾರ್ಗವಾಗಿ ತಿರುಪತಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಮದನಪಲ್ಲಿ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬಸ್ ಪಲ್ಟಿಯಾದರೆ, ಬಲೆನೋ ಕಾರು ಧಗಧಗನೆ ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಗೆಗೆ ಕಾರಿನಲ್ಲಿದ್ದ ತಾಯಿ ಕಲಾವತಿ, ಮಗ ಧನಂಜಯ್ ಸಜೀವ ದಹನಗೊಂಡಿದ್ದಾರೆ. ಕಾರಿನಲ್ಲಿದ್ದ ಉಮಾದೇವಿ, ಮೂರು ವರ್ಷದ ಮಾನ್ವಿತ, ಹಾಗೂ ಶೋಭಾ ಎಂಬುವವರು ಪ್ರಾಣಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಬಸ್ನಲ್ಲಿ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಚಿಂತಾಮಣಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರು ಧಗಧಗನೆ ಹೊತ್ತಿ ಉರಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದರು ಪ್ರಯೋಜನವಾಗಲಿಲ್ಲ. ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಎಸ್ಪಿ ಕುಶಾಲ್ ಚೌಕ್ಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.