ಚಿಕ್ಕಬಳ್ಳಾಪುರ :
ದೇಶದೆಲ್ಲೆಡೆ ಹಕ್ಕಿಜ್ವರದ ಭೀತಿ ಎದುರಾಗಿರುವಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಗೆ ಹಕ್ಕಿಜ್ವರದಿಂದ ಕಂಟಕ ಎದುರಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕು ವರದಹಳ್ಳಿ ಗ್ರಾಮದಲ್ಲಿ ದ್ಯಾವಪ್ಪ ಎಂಬುವರು ಸಂತೆಯಿಂದ ತಂದ ನಾಟಿಕೋಳಿಗಳು ಏಕಾಏಕಿ ಸಾವನ್ನಪ್ಪಿದ್ದರಿಂದ ಭಯಗೊಂಡು ಪಶುವೈದ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ಕೋಳಿಗಳ ಸಾವಿನ ಬಗ್ಗೆ ಅನುಮಾನಗೊಂಡು ಪರೀಕ್ಷೆಗೊಳಪಡಿಸಿದಾಗ ಹಕ್ಕಿಜ್ವರ ಇರೋದು ದೃಢಪಟ್ಟಿದೆ. ಹೀಗಾಗಿ ಅಲರ್ಟ್ ಆದ ಜಿಲ್ಲಾಡಳಿತ ಅಧಿಕಾರಿಗಳೊಂದಿಗೆ ಮೀಟಿಂಗ್ ಮಾಡೊ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ. ಅಲ್ಲದೇ ವರದಹಳ್ಳಿ ಗ್ರಾಮದ ಸುತ್ತಮುತ್ತ ಪೊಲೀಸರು ನಾಕಾಬಂಧಿ ವಿಧಿಸಿದ್ದು, ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿರೋ ಕೋಳಿಗಳನ್ನು ವಶಕ್ಕೆ ಪಡೆಯಲು ಮುಂದಾಗಿದೆ.
ಇನ್ನು ಇಡೀ ಗ್ರಾಮಕ್ಕೆ ನಾಕಾಬಂಧಿ ವಿಧಿಸಿದ್ದಲ್ಲದೇ, ಗ್ರಾಮದಲ್ಲಿ ಇರೋ ಕೋಳಿಗಳನ್ನು ಹತ್ಯೆಮಾಡಿ, ನಿಯಮಾನುಸಾರ ಮಣ್ಣು ಮಾಡಿ ವೈರಸ್ ನಿರ್ಮೂಲನೆಗೆ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ವರದಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ.
ಒಟ್ಟಿನಲ್ಲಿ ನೆಮ್ಮದಿಯಾಗಿದ್ದ ವರದಹಳ್ಳಿ ಗ್ರಾಮದಲ್ಲಿ ಹಕ್ಕಿಜ್ವರದಿಂದ ರೈತರಲ್ಲಿ ಆತಂಕ ಮನೆ ಮಾಡಿದ್ದು, ಪ್ರಾಣಿಗಳ ಜೊತೆ ಸಹಜೀವನ ರೂಪಿಸಿಕೊಂಡಿದ್ದ ರೈತರಿಗೆ ಹಕ್ಕಿಜ್ವರ ಪೀಕಲಾಟ ತಂದಿದೆ. ವೈರಸ್ ವ್ಯಾಪಿಸದಂತೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಕ್ಕೆ ನಾಗರೀಕರು ಸಹಕರಿಸಬೇಕಾಗಿದೆ.