ಕೆನಡಾ:
ಲ್ಯಾಂಡಿಂಗ್ ಸಮಯದಲ್ಲಿ ಡೆಲ್ಟಾ ಏರ್ಲೈನ್ಸ್ ವಿಮಾನ ಅಪಘಾತಕ್ಕೀಡಾದ ಘಟನೆ ಕೆನಡಾ ಟೊರೊಂಟೊದಲ್ಲಿರುವ ಪಿಯರ್ಸನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಿಮಾನ ಅಮೆರಿಕದ ಮಿನ್ನಿಯಾಪೋಲಿಸ್ನಿಂದ ಟೊರೊಂಟೊಗೆ ಆಗಮಿಸುವ ವೇಳೆ ಈ ದುರಂತ ಸಂಭವಿಸಿದೆ
ವಿಮಾನದಲ್ಲಿ 76 ಪ್ರಯಾಣಿಕರು ಮತ್ತು 4 ಸಿಬ್ಬಂದಿ ಸೇರಿದಂತೆ 80 ಜನರಿದ್ದರು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ 18 ಜನರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಇತರರು ಸಣ್ಣಪುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ವರದಿಗಳ ಪ್ರಕಾರ ಫ್ಲಾಪ್ ಆಕ್ಯೂವೇಟರ್ ವೈಫಲ್ಯದಿಂದಾಗಿ ವಿಮಾನದ ರೆಕ್ಕೆಗಳ ಮೇಲಿನ ಫ್ಲಾಪ್ಗಳು ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ. ಇದರಿಂದಾಗಿ ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ಇದ್ದಕ್ಕಿದ್ದಂತೆ ಉರುಳಿದೆ.
ಕೆನಡಾದ ಸಾರಿಗೆ ಸುರಕ್ಷತಾ ಮಂಡಳಿ ಮತ್ತು ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಅಪಘಾತದ ತನಿಖೆ ನಡೆಸುತ್ತಿವೆ. ಅಪಘಾತದ ನಂತರ ರಕ್ಷಣಾ ತಂಡ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ. ಅಗ್ನಿಶಾಮಕ ದಳ ವಿಮಾನದಲ್ಲಿನ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ವಿಮಾನ ತಲೆಕೆಳಗಾಗಿ ಬಿದ್ದಿದ್ದರಿಂದ ಅನೇಕರಿಗೆ ಗಾಯಗಳಾಗಿವೆ. ಈ ಅಪಘಾತದಿಂದಾಗಿ ಟೊರೊಂಟೊ ವಿಮಾನ ನಿಲ್ದಾಣದಲ್ಲಿ 200 ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಕೆಲವು ಗಂಟೆಗಳ ನಂತರ ವಿಮಾನ ಕಾರ್ಯಾಚರಣೆಗಳು ಪುನರಾರಂಭಗೊಂಡಿವೆ.