ಬೆಂಗಳೂರು : BMTCಯಿಂದ ‘ದಿವ್ಯ ದರ್ಶನ’ ಟೆಂಪಲ್ ಟೂರ್ ಯೋಜನೆಗೆ ಚಾಲನೆ

ಬೆಂಗಳೂರು : ಬೆಂಗಳೂರು ನಗರದ ನಾಗರಿಕರು ಮತ್ತು ದೇವಾಲಯ ಭಕ್ತರಿಗೆ ಸಂತಸದ ಸುದ್ದಿ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನಗರದ ಪ್ರಸಿದ್ಧ ದೇವಾಲಯಗಳ ದರ್ಶನಕ್ಕಾಗಿ ಹೊಸ ವೀಕೆಂಡ್ ಪ್ಯಾಕೇಜ್ ಟೂರ್ ಯೋಜನೆಗೆ ಚಾಲನೆ ನೀಡಿದೆ. ‘ದಿವ್ಯ ದರ್ಶನ’ ಎಂಬ ಹೆಸರಿನಲ್ಲಿ ರೂಪುಗೊಂಡ ಈ ವಿಶೇಷ ಸೇವೆಗೆ ಇಂದು ಅಧಿಕೃತವಾಗಿ ಚಾಲನೆ ನೀಡಿದ್ದು, ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ರಾಜ್ಯ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ನೆರವೇರಿಸಿದರು.

ಈ ಯೋಜನೆಯ ಪ್ರಕಾರ, ಬಿಎಂಟಿಸಿ ವಾರಾಂತ್ಯದಲ್ಲಿ ಪ್ರಯಾಣಿಕರನ್ನು ಎಸಿ ಬಸ್‌ಗಳಲ್ಲಿ ಬೆಂಗಳೂರಿನ ಎಂಟು ಪ್ರಮುಖ ದೇವಾಲಯಗಳಿಗೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡಿದೆ. ಒಂದು ದಿನದ ಪೂರ್ತಿ ದರ್ಶನ ಕಾರ್ಯಕ್ರಮವಿದ್ದು, ಬೆಳಿಗ್ಗೆ 6:30ಕ್ಕೆ ಮೆಜೆಸ್ಟಿಕ್ ನಿಂದ ಹೊರಟು, ಸಂಜೆ 6:30ಕ್ಕೆ ಮರಳಿ ಮೆಜೆಸ್ಟಿಕ್ ಗೆ ವಾಪಸ್ ಆಗುವಂತೆ ಟೂರ್ ರಚಿಸಲಾಗಿದೆ.

‘ದಿವ್ಯ ದರ್ಶನ’ ಪ್ಯಾಕೇಜ್‌ನಲ್ಲಿ ಒಳಗೊಂಡಿರುವ ದೇವಾಲಯಗಳು ಹೀಗಿವೆ:

  1. ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ
  2. ರಾಜರಾಜೇಶ್ವರಿ ದೇವಾಲಯ
  3. ಶೃಂಗಗಿರಿ ಷಣ್ಮುಖ ದೇವಾಸ್ಥಾನ
  4. ಕುರುಮಾರಿಯಮ್ಮ ದೇವಾಲಯ
  5. ಓಂಕಾರ ಹೀಲ್ಸ್
  6. ಇಸ್ಕಾನ್ ವೈಕುಂಠ ದೇವಾಲಯ
  7. ಆರ್ಟ್ ಆಫ್ ಲಿವಿಂಗ್ ಆಶ್ರಮ
  8. ಬನಶಂಕರಿ ದೇವಾಲಯ

ಪ್ರತಿಯೊಂದು ದೇವಾಲಯಕ್ಕೂ ಸರಿಯಾದ ಸಮಯ ಮೀಸಲಾಗಿಸಲಾಗಿದ್ದು, ಭಕ್ತರು ತೊಂದರೆ ಇಲ್ಲದೆ ದರ್ಶನ ಮಾಡಲು ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಬಿಎಂಟಿಸಿ ಅಧಿಕೃತರು ತಿಳಿಸಿದಂತೆ, ಬಸ್‌ಗಳಲ್ಲಿ ಪ್ರವಾಸಿಗರಿಗಾಗಿ ಗೈಡ್‌ಗಳ ಸೌಲಭ್ಯವೂ ಇರಲಿದೆ. ಅವರು ಪ್ರತಿಯೊಂದು ದೇವಾಲಯದ ಇತಿಹಾಸ, ವೈಶಿಷ್ಟ್ಯತೆಗಳನ್ನು ವಿವರಿಸುತ್ತಾ ಭಕ್ತರಲ್ಲಿ ಆಧ್ಯಾತ್ಮಿಕ ಬದ್ಧತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಿದ್ದಾರೆ.

ಟಿಕೆಟ್ ದರಗಳು ಹೀಗಿವೆ:

  • ವಯಸ್ಕರಿಗೆ: ₹450
  • ಮಕ್ಕಳಿಗೆ: ₹350 (ವಯೋಮಿತಿ ಪ್ರಕಾರ ವಿನ್ಯಾಸಗೊಳಿಸಲಾಗಿದೆ)

ಪ್ರತ್ಯೇಕ ಪ್ರವೇಶ ಟಿಕೆಟ್ ಅಥವಾ ಊಟದ ವ್ಯವಸ್ಥೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಎಂಟಿಸಿ ಅಧಿಕೃತ ವೆಬ್‌ಸೈಟ್ ಅಥವಾ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿರುವ ಮಾಹಿತಿ ಕೌಂಟರ್‌ಗಳಲ್ಲಿ ಪಡೆಯಬಹುದು.

ಈ ಯೋಜನೆಯ ಪ್ರಮುಖ ಉದ್ದೇಶ ನಾಡಿನ ಧಾರ್ಮಿಕ, ಸಾಂಸ್ಕೃತಿಕ ಪರಂಪರೆಯನ್ನು ಜನತೆಗೆ ಪರಿಚಯಿಸುವ ಜೊತೆಗೆ ನಗರವಾಸಿಗಳಿಗೆ ಉತ್ತಮ ಪ್ರವಾಸ ಅನುಭವ ಒದಗಿಸುವುದು. ಇದರಿಂದ ಧಾರ್ಮಿಕ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ ಎಂಬ ನಂಬಿಕೆ ಇದ್ದು, ಭಕ್ತಾದಿಗಳು ಈ ಸೇವೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳುವಂತೆ ಸಚಿವರು ವಿನಂತಿಸಿದರು. ಈ ಯೋಜನೆ ಇದೇ ವಾರಾಂತ್ಯದಿಂದ ಆರಂಭವಾಗಲಿದ್ದು, ಈ ಸೇವೆಯನ್ನು ಬಳಸಿಕೊಳ್ಳಲು ಬಿಎಂಟಿಸಿ ಅಧಿಕೃತ ವೆಬ್‌ಸೈಟ್ ಅಥವಾ ಮೆಜೆಸ್ಟಿಕ್ ಬಸ್ ನಿಲ್ದಾಣದ ಟಿಕೆಟ್ ಕೌಂಟರ್‌ನಲ್ಲಿ ಮುಂಗಡ ಬುಕ್ಕಿಂಗ್ ಮಾಡಬಹುದು.

 

Author:

...
Keerthana J

Copy Editor

prajashakthi tv

share
No Reviews