ತುಮಕೂರು : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ತುಮಕೂರು ಜಿಲ್ಲಾ ಬಿಜೆಪಿ ಗುಡುಗಿದೆ. ಇತ್ತೀಚೆಗಿನ ಹಿಂದೂ ಕಾರ್ಯಕರ್ತರ ಹತ್ಯೆಗಳು ಮತ್ತು ಶಾಸಕರ ಮೇಲೆ ನಡೆದಿರುವ ಹಲ್ಲೆ ಘಟನೆಗಳು ಇದಕ್ಕೆ ಸಾಕ್ಷಿಯೆಂದು ಬಿಜೆಪಿ ಆರೋಪಿಸಿದೆ.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಮೇಲೆ ಕಲ್ಬುರ್ಗಿಯಲ್ಲಿ ನಡೆದ ಹಲ್ಲೆಯನ್ನು ಬಿಜೆಪಿಯು ತೀವ್ರವಾಗಿ ಖಂಡಿಸಿದೆ. ಅವರು ಸರ್ಕಾರಿ ಕಾರ್ಯಕ್ರಮದ ನಿಮಿತ್ತ ಕಲ್ಬುರ್ಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಪ್ರಿಯಾಂಕ ಖರ್ಗೆ ಅವರ ಅನುಯಾಯಿಗಳಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ.
ಬಿಜೆಪಿ ಮುಖಂಡ ವೈ.ಎಚ್. ಹುಚ್ಚಯ್ಯ ಮತ್ತು ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಈ ರಾಜ್ಯದಲ್ಲಿ ಸರ್ಕಾರವಿದೆಯೋ ಇಲ್ಲವೋ ಎಂಬ ಶಂಕೆ ಮೂಡುತ್ತಿದೆ. ರಾಜ್ಯದಲ್ಲಿ ಗೃಹ ಮಂತ್ರಿಗಳು ಬದುಕಿದ್ದಾರೋ ಇಲ್ಲವೋ ಎಂಬುದು ಯಕ್ಷ ಪ್ರಶ್ನೆಯಾಗಿದೆ, ಡಾ. ಜಿ. ಪರಮೇಶ್ವರ್ ಗೃಹ ಸಚಿವಾರದ ಬಳಿಕ ಕೊಲೆ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ,” ಎಂದರು.
ಬಿಜೆಪಿಯು ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ನೀತಿಯನ್ನೂ ತೀವ್ರವಾಗಿ ಆರೋಪಿಸಿದೆ. “ರಾಜ್ಯದ ಜನತೆ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಗೃಹ ಇಲಾಖೆ ನಡೆಸುವಲ್ಲಿ ಗೃಹ ಸಚಿವರು ಪೂರ್ತಿಯಾಗಿ ವಿಫಲರಾಗಿದ್ದಾರೆ” ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಮೇ 24ರಂದು ರಾಜ್ಯಾದ್ಯಂತ ಹೋರಾಟಕ್ಕೆ ಬಿಜೆಪಿ ಕರೆ ನೀಡಿದ್ದು, ವಿಜಯೇಂದ್ರ ಅವರ ನೇತೃತ್ವದಲ್ಲಿ ‘ಕಲ್ಬುರ್ಗಿ ಚಲೋ’ ನಡೆಯಲಿದೆ. “ಪ್ರಿಯಾಂಕ ಖರ್ಗೆ ಹಾಗೂ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರೆಯುತ್ತದೆ,” ಎಂದು ಬಿಜೆಪಿ ಘೋಷಿಸಿದೆ.