ಕೊರಟಗೆರೆ :
ತುಮಕೂರು ಜಿಲ್ಲೆಯಲ್ಲಿ ನಿನ್ನೆ ಮಳೆ ಗಾಳಿಯ ಅಬ್ಬರ ಕೊಂಚ ಜಾಸ್ತಿಯೇ ಇತ್ತು. ಗುಡುಗು ಮಿಂಚಿನ ಬಿರುಗಾಳಿಗೆ ದ್ವಿಚಕ್ರ ವಾಹನದ ಮೇಲೆ ವಿದ್ಯುತ್ ತಂತಿ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊರಟಗೆರೆ ತಾಲೂಕಿನ ವಡ್ಡಗೆರೆಯ ಚೀಲಗಾನಹಳ್ಳಿಯಲ್ಲಿ ನಡೆದಿದೆ. 33 ವರ್ಷದ ಯೋಗೀಶ್ ಎಂಬಾತ ಮೃತ ದುರ್ದೈವಿಯಾಗಿದ್ದಾನೆ.
ಕೊರಟಗೆರೆ ತಾಲೂಕು ಕಸಬಾ ಹೋಬಳಿ ವಡ್ಡಗೆರೆ ಗ್ರಾಮ ಪಂಚಾಯ್ತಿಯ ಚೀಲಗಾನಹಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ಮಾರ್ಗಮಧ್ಯೆ ಈ ಅವಘಡ ಸಂಭವಿಸಿದೆ. ಮೃತ ಯುವಕ ಯೋಗಿಶ್ ಮತ್ತು ಆತನ ಸ್ನೇಹಿತ ನರಸಿಂಹಮೂರ್ತಿ ಬೈಕ್‌ನಲ್ಲಿ ವಡ್ಡಗೆರೆಯಿಂದ ಚೀಲಗಾನಹಳ್ಳಿಗೆ ತೆರಳುತ್ತಿದ್ದರು. ಈ ವೇಳೆ ಬಿರುಗಾಳಿಯ ಅಬ್ಬರ ಹೆಚ್ಚಿದ್ದರಿಂದ ಏಕಾಏಕಿ ವಿದ್ಯುತ್ ತಂತಿ ಕಟ್ಟಾಗಿ ದ್ವಿಚಕ್ರ ವಾಹನದ ಮೇಲೆ ಬಿದ್ದ ಪರಿಣಾಮ ಯೋಗೀಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನೋರ್ವ ನರಸಿಂಹಮೂರ್ತಿ ಎಂಬಾತ ಚರಂಡಿಗೆ ಬಿದ್ದು ಒದ್ದಾಡುತ್ತಿದ್ದ. ಈ ವೇಳೆ ಅದೇ ರಸ್ತೆಯಲ್ಲಿ ಸಂಚರಿಸ್ತಾ ಇದ್ದ ಸ್ಥಳೀಯ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ನರೇಂದ್ರ ಬಾಬು ಮತ್ತೇ ಅವರ ಸಂಗಡಿಗರು ಗಾಯಾಳುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೆಸ್ಕಾಂ ಇಲಾಖೆ ಎಇಇ ಪ್ರಸನ್ನಕುಮಾರ್, ಸಿಪಿಐ ಅನಿಲ್ ಭೇಟಿನೀಡಿ ಪರಿಶೀಲನೆ ನಡೆಸಿದ್ದು. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.