ಬೀದರ್:
ದೇಶದ ಬೇರೆ ರಾಜ್ಯಗಳಾದ ಮಹಾರಾಷ್ಟ್ರದ ಲಾತುರ್, ಹೈದರಾಬಾದ್ ಹಾಗೂ ತೆಲಂಗಾಣದಲ್ಲಿ ಹಕ್ಕಿ ಜ್ವರ ಮತ್ತು ಕೋಳಿ ಶೀತ ಜ್ವರ ಕಾಣಿಸಿಕೊಂಡ ಹಿನ್ನೆಲೆ ಬೀದರ್ ಜಿಲ್ಲೆಯ ಚೆಕ್ ಪೋಸ್ಟ್ ನಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಹಾಗೂ ಕೆಲವು ರಾಜ್ಯಗಳಲ್ಲಿ ಕೋಳಿಗಳನ್ನು ನಾಶಪಡಿಸಲಾಗುತ್ತಿದೆ. ಹಾಗೂ ವೈದ್ಯರು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲು ಸೂಚಿಸಿದ್ದಾರೆ.
ಈಗಾಗಲೇ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಇದರಿಂದ ಕರ್ನಾಟಕದ ಗಡಿ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕವು ಗಡಿ ಕಣ್ಗಾವಲು ಮತ್ತು ಮೇಲ್ವಿಚಾರಣೆಯನ್ನು ಹೆಚ್ಚಿಸಿದೆ. ರಾಜ್ಯದ ಪಶುಸಂಗೋಪನಾ ಇಲಾಖೆಯು ಈ ರಾಜ್ಯಗಳಿಂದ ಪ್ರವೇಶಿಸುವ ಕೋಳಿಗಳ ಲಾರಿಗಳ ತಪಾಸಣೆಯನ್ನು ಹೆಚ್ಚಿಸಿದೆ ಎಂದು ವರದಿಯಾಗಿದೆ. ನಿರ್ದಿಷ್ಟವಾಗಿ ಬೀದರ್, ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಗಳ ಮೇಲೆ ಗಮನಹರಿಸಲಾಗಿದೆ.
ಮಹಾರಾಷ್ಟ್ರದಿಂದ ಬೀದರ್ ಜಿಲ್ಲೆಗೆ ಕೋಳಿ ಉತ್ಪನ್ನ ಸಾಗಾಣಿಕೆ ನಿರ್ಭಂದ ಮಾಡಲಾಗಿದ್ದು. ಕೋಳಿ ಮಾಂಸ, ಕೋಳಿ ಮೊಟ್ಟೆ ಅಥವಾ ಕೋಳಿಗಳಿಗೆ ಹಾಕುವ ಆಹಾರ ಬೀದರ್ ಜಿಲ್ಲೆಗೆ ಮಹಾರಾಷ್ಟ್ರದಿಂದ ಬರದಂತೆ ನಿಷೇಧಿಸಿದ್ದು, ಇದರ ಬಗ್ಗೆ ಗಡಿ ಚೆಕ್ ಪೋಸ್ಟ್ ನಲ್ಲಿ ಕಟ್ಟೆಚ್ಚರವಹಿಸಲಾಗಿದೆ.
ಬೀದರ್ ಜಿಲ್ಲೆಯ ಗಡಿ ತಾಲೂಕುಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಪಶುಸಂಗೋಪನೆ ಇಲಾಖೆ ಸಿಬ್ಬಂದಿ ಚೆಕ್ ಪೋಸ್ಟ್ ಸ್ಥಾಪಿಸಿ ತಪಾಸಣೆ ನಡೆಸಲಾಗುತ್ತಿದೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಂತೆ ಇರುವ ಬಸವಕಲ್ಯಾಣ ತಾಲೂಕು, ಔರಾದ ತಾಲೂಕು, ಭಾಲ್ಕಿ ತಾಲೂಕು, ಕಮಲನಗರ ತಾಲೂಕು ಗಡಿಯಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ನರಸಪ್ಪಾ ಮಾಹಿತಿ ನೀಡಿದ್ದಾರೆ.