ಬೆಂಗಳೂರು : ಹಿರಿಯ ಕಾಲಿವುಡ್ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ನಟನೆಯ ʼಥಗ್ ಲೈಫ್ʼ ಸಿನಿಮಾ ಪ್ರಚಾರದ ವೇಳೆ ನೀಡಿದ ಭಾಷಾ ಸಂಬಂಧಿತ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಅವರು ನೀಡಿದ, " ತಮಿಳಿನಿಂದ ಕನ್ನಡ ಹುಟ್ಟಿದ್ದು,” ಎಂಬ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಬೆಂಗಳೂರಿನಲ್ಲಿ ಚಿತ್ರದ ಪ್ರಚಾರಕ್ಕಾಗಿ ಕಮಲ್ ಹಾಸನ್ ಆಗಮಿಸಿದ್ದರು, ಕಾರ್ಯಕ್ರಮದಲ್ಲಿ ನಟ ಶಿವಣ್ಣ ಕೂಡ ಅತಿಥಿಯಾಗಿ ಭಾಗವಹಿಸಿದ್ದರು, ಈ ವೇಳೆ ಮಾತನಾಡುವಾಗ ಶಿವಣ್ಣ ಎದುರೇ ನಟ ಕಮಲ್ ಹಾಸನ್ ನಿಮ್ಮ ಕನ್ನಡ ಹುಟ್ಟಿದ್ದು, ತಮಿಳಿನಿಂದ ಎಂದು ಹೇಳಿದ್ದಾರೆ. ಕಮಲ್ ಹಾಸನ್ ಈ ಹೇಳಿಕೆಗೆ ಕನ್ನಡಿಗರು ರಾಂಗ್ ಆಗಿದ್ದಾರೆ.
ಹೀಗಾಗಿ ಕಮಲ್ ಆಡಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕನ್ನಡ ತಮಿಳಿನಿಂದ ಬಂದಿಲ್ಲ. ತಮಿಳಿಗಿಂತ ಕನ್ನಡ ಭಾಷೆಯೇ ಪುರಾತನವಾದದ್ದು ಎಂದು ಕನ್ನಡಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಟ್ವಿಟ್ಟರ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಮುಂತಾದ ಪ್ಲಾಟ್ಫಾರ್ಮ್ಗಳಲ್ಲಿ ಸಾವಿರಾರು ಜನರು ಕಮಲ್ ಹಾಸನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕನ್ನಡ ಭಾಷೆ ಪುರಾತನ, ಸಮೃದ್ಧ ಇತಿಹಾಸ ಹೊಂದಿರುವ ಸ್ವತಂತ್ರ ದ್ರಾವಿಡ ಭಾಷೆಯೆಂದು ನೆನೆಸಿದ್ದಾರೆ. "ಕನ್ನಡಕ್ಕೆ ತಮಿಳಿನಿಂದ ಹುಟ್ಟಿದ ಭಾಷೆ ಎಂಬುದು ಅಪಮಾನ" ಎಂದು ಹಲವರು ಹೇಳಿದ್ದಾರೆ.
ಈ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ ಕೆಲ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಿಗರು ಕಮಲ್ ಹಾಸನ್ ತಕ್ಷಣವೇ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.