ಬೆಳಗಾವಿ : ಅಂಗನವಾಡಿ ಸಹಾಯಕಿಯ ವರ್ಗಾವಣೆಗೆ ಲಂಚ ಕೇಳಿದ ಆರೋಪದ ಮೇಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಹುಕ್ಕೇರಿ ತಾಲ್ಲೂಕಿನ ಶಕುಂತಲಾ ಕಾಂಬ್ಳೆ ಎಂಬ ಅಂಗನವಾಡಿ ಸಹಾಯಕಿಯ ವರ್ಗಾವಣೆಗೆ 30 ಸಾವಿರ ರೂಪಾಯಿ ಲಂಚ ಕೇಳಿದ್ದು, ಈ ಸಂಬಂಧ ಸೂಪರಿಂಟೆಂಡೆಂಟ್ ಅಬ್ದುಲ್ ಅಲಿ ಹಾಗೂ ಕಂಪ್ಯೂಟರ್ ಆಪರೇಟರ್ ಸೌಮ್ಯಾ ಬಡಿಗೇರ್ ವಿರುದ್ಧ ಲೋಕಾಯುಕ್ತ ಠಾಣೆಯಲ್ಲಿ ಅಂಗನವಾಡಿ ಸಹಾಯಕಿ ದೂರು ದಾಖಲಿಸಿದ್ದರು.
ಸಹಾಯಕಿಯ ದೂರು ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಕಚೇರಿಗೆ ಭೇಟಿ ನೀಡಿದ ವೇಳೆ 15 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಸ್ಥಳದಲ್ಲಿಯೇ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ದಾಳಿ ವೇಳೆ ಸೌಮ್ಯಾ ಬಡಿಗೇರ್ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಯಿತು.
ಬಂಧಿತ ಅಧಿಕಾರಿಗಳನ್ನು ವಿಚಾರಣೆಗಾಗಿ ಲೋಕಾಯುಕ್ತ ಠಾಣೆಗೆ ಕರೆದೊಯ್ಯಲಾಗಿದ್ದು, ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.