Beauty Tips:
ನೀವು ಎಷ್ಟೇ ಸುಂದರವಾಗಿದ್ದರೂ ನಿಮ್ಮ ಮುಖದ ಮೇಲೆ ಕಪ್ಪು ಕಲೆಗಳಿದ್ದರೆ ಅವುಗಳು ನಿಮ್ಮ ಸೌಂದರ್ಯವನ್ನು ಕಡಿಮೆ ಮಾಡುತ್ತವೆ. ಹಾಗಾಗಿ ಮುಖವನ್ನು ಕಾಂತಿಯುತವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಹರಸಾಹಸ ಪಡುವವರು ಮನೆಯಲ್ಲಿಯೇ ದಾಳಿಂಬೆ ಸಿಪ್ಪೆಯಿಂದ ತಯಾರಿಸಿಕೊಳ್ಳಬಹುದಾದ ಸರಳವಾದ ಸ್ಕ್ರಬ್ ಮೂಲಕ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಬಹುದು.
ದಾಳಿಂಬೆ ಹಣ್ಣು ಆರೋಗ್ಯಕ್ಕೆ ಮಾತ್ರವಲ್ಲ ಇದು ನಿಮ್ಮ ಸೌಂದರ್ಯ ಹೆಚ್ಚಿಸಲು ಕೂಡ ಬಳಕೆಯಾಗುತ್ತದೆ ಎಂದರೆ ಹೌದು. ಇದು ತಿನ್ನಲು ಮಾತ್ರವಲ್ಲ, ಮುಖಕ್ಕೆ ಸ್ಕ್ರಬ್ ಆಗಿ ಬಳಸುವುದರಿಂದ ಉತ್ತಮ ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ. ದಾಳಿಂಬೆ ಹಣ್ಣಿನಲ್ಲಿ ಔಷಧೀಯ ಗುಣಗಳು ಸಮೃದ್ಧವಾಗಿದ್ದು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
ಹಣ್ಣು ಮಾತ್ರವಲ್ಲ ಅದರ ಸಿಪ್ಪೆ, ತೊಗಟೆ, ಹೂವು ಇತ್ಯಾದಿ, ಎಲ್ಲಾ ಭಾಗದಲ್ಲಿಯೂ ಪೌಷ್ಠಿಕಾಂಶದ ಜೊತೆಗೆ ಔಷಧೀಯ ಮೌಲ್ಯಗಳನ್ನು ಹೊಂದಿವೆ. ಇವುಗಳನ್ನು ಸರಿಯಾದ ವಿಧಾನಗಳಲ್ಲಿ ಬಳಸಿದರೆ, ಚರ್ಮ ಕಾಂತಿಯುತವಾಗುವುದಲ್ಲದೆ ಮುಖದ ಮೇಲಿನ ಕಲೆಗಳು ಕೂಡ ಕಡಿಮೆಯಾಗುತ್ತವೆ. ಹಾಗಾದರೆ ಈ ಹಣ್ಣನ್ನು ಬಳಕೆ ಮಾಡುವುದು ಹೇಗೆ? ಯಾವ ರೀತಿ ಸ್ಕ್ರಬ್ ತಯಾರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.
ನಮ್ಮ ಚರ್ಮದ ಆರೋಗ್ಯದ ಜೊತೆಗೆ ಮುಖದ ಕಾಂತಿ ಹೆಚ್ಚಿಸಲು, ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಸಂಜೆಯ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿಕೊಂಡು ಅದನ್ನು ಮೃದುವಾಗಿ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯ ಬಳಕೆಯು ಮುಖಕ್ಕೆ ಒಳ್ಳೆಯ ಫಲಿತಾಂಶ ನೀಡುವುದಲ್ಲದೆ ಇದನ್ನು ಸುರಕ್ಷಿತವಾಗಿ ಸಂಗ್ರಹಿಸಿಟ್ಟುಕೊಂಡು ಅಗತ್ಯಕ್ಕೆ ಅನುಗುಣವಾಗಿ ಬಳಸಬಹುದು.
ದಾಳಿಂಬೆ ಸಿಪ್ಪೆಯ ಪುಡಿಯನ್ನು ತೆಗೆದುಕೊಂಡು ಒಂದು ಚಮಚ ಸಕ್ಕರೆ, ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಆವಕಾಡೊ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮೂರು ಪದಾರ್ಥಗಳನ್ನು ಒಟ್ಟುಗೂಡಿಸಿದಾಗ ಒಳ್ಳೆಯ ಸ್ಕ್ರಬ್ ತಯಾರಾಗುತ್ತದೆ. ಈ ಮಿಶ್ರಣವನ್ನು ಪೇಸ್ಟ್ ನಂತೆ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಂಡರೆ ಚರ್ಮವು ಕಾಂತಿಯುತವಾಗುತ್ತದೆ.ಸ್ಕ್ರಬ್ ಹಚ್ಚುವ ಮೊದಲು, ಮುಖವನ್ನು ಸ್ವಚ್ಛವಾಗಿ ತೊಳೆಯಿರಿ. ಬಳಿಕ ಈ ಸ್ಕ್ರಬ್ ಅನ್ನು ಮುಖದ ಮೇಲೆ ಚೆನ್ನಾಗಿ ಉಜ್ಜಿಕೊಳ್ಳಿ. ನಿಮ್ಮ ಕೈಗಳಿಂದ ಮಸಾಜ್ ಮಾಡಿ ಮತ್ತು ಚರ್ಮಕ್ಕೆ ನಿಧಾನವಾಗಿ ಹಚ್ಚಿರಿ. ಮಸಾಜ್ ಮಾಡಿ 10- 15 ನಿಮಿಷಗಳ ಕಾಲ ಬಿಡಿ ಬಳಿಕ ನೀರಿನಿಂದ ತೊಳೆದುಕೊಳ್ಳಿ. ಈ ರೀತಿ ಮಾಡುವುದರಿಂದ ಚರ್ಮ ಮೃದುವಾಗುವುದಲ್ಲದೆ ಕಾಂತಿಯುತವಾಗುತ್ತದೆ.