STATE : ನಿನ್ನೆ ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಫೈನಲ್ ಪಂದ್ಯ ಕ್ರಿಕೆಟ್ ಪ್ರೇಮಿಗಳಿಗೆ ನಿಜಕ್ಕೂ ಅತಿ ಮಹತ್ವದ ಕ್ಷಣ. ದಶಕಗಳಿಂದ RCB ಅಭಿಮಾನಿಗಳು ಕಾಯುತ್ತಿದ್ದ ಕನಸು ಇಡೀ ದೇಶವೇ ನೋಡುತ್ತಿದ್ದ ಫೈನಲ್‌ನಲ್ಲಿ ಈಡೇರಿದೆ.
ಹೌದು, ನಿನ್ನೆ ನಡೆದ IPL 2025 ಫೈನಲ್ ಪಂದ್ಯ ಭಾರತದಲ್ಲಿ ಮಾತ್ರವಲ್ಲ, ಕರ್ನಾಟಕದಲ್ಲೂ ಸಂಭ್ರಮದ ಸಿಡಿಲಂತೆ ಪರಿಣಮಿಸಿತು. RCB ಮೊದಲ ಬಾರಿಗೆ ಐಪಿಎಲ್ ಕಪ್ ಗೆದ್ದ ಸಂಭ್ರಮದಲ್ಲಿ ಕೋಟ್ಯಾಂತರ ಅಭಿಮಾನಿಗಳು ವಿಶೇಷ ರೀತಿಯಲ್ಲಿ ವಿಜಯೋತ್ಸವ ಆಚರಿಸಿದ್ದಾರೆ.
ಇದಕ್ಕೆ ಸಾಕ್ಷಿಯಾಗಿ ನಿನ್ನೆ, ಜೂನ್ 3ರಂದು, ಕರ್ನಾಟಕದಲ್ಲಿ ದಾಖಲೆ ಮಟ್ಟದಲ್ಲಿ ಮದ್ಯ ಮಾರಾಟವಾಗಿದೆ. ಸರ್ಕಾರಿ ಅಂಕಿಅಂಶಗಳ ಪ್ರಕಾರ, ಒಂದೇ ದಿನ 1.48 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. ಇದರ ಮೌಲ್ಯ ಬರೋಬ್ಬರಿ 30 ಕೋಟಿ 66 ಲಕ್ಷ ರೂಪಾಯಿ. ಇಷ್ಟರಲ್ಲೇ ಅಲ್ಲ. ಲಿಕ್ಕರ್ ವಿಭಾಗದಲ್ಲಿ ಇನ್ನೂ ಭಾರಿ ಸೇಲ್ ದಾಖಲಾಗಿದೆ. ಒಟ್ಟು 1.28 ಲಕ್ಷ ಬಾಕ್ಸ್ ಲಿಕ್ಕರ್ ಮಾರಾಟವಾಗಿ, 127 ಕೋಟಿ 88 ಲಕ್ಷ ರೂಪಾಯಿ ಮೌಲ್ಯದ ವ್ಯಾಪಾರ ನಡೆದಿದ್ದು, ಒಟ್ಟು 157.94 ಕೋಟಿ ರೂ ಮೌಲ್ಯದ ಮದ್ಯ ಮಾರಾಟವಾಗಿದೆ.
ಇದರೊಂದಿಗೆ ಹಿಂದಿನ ವರ್ಷದ ದಾಖಲೆಗಳು ಮಗ್ಗುಚು ಮಾಡಿಕೊಂಡಿವೆ. 2024ರ ಜೂನ್ 3ರಂದು ಕೇವಲ 0.36 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿ, ಅಂದಾಜು 6.29 ಕೋಟಿ ಆದಾಯ ಮಾತ್ರ ಬರುತ್ತಿತ್ತು. ಲಿಕ್ಕರ್ ಸೇಲ್ 19.41 ಕೋಟಿ ಮೌಲ್ಯದಷ್ಟಿತ್ತು. ಒಟ್ಟಾರೆ ಆದಾಯ 25 ಕೋಟಿ ರೂಪಾಯಿಯಷ್ಟೆ. ಈ ವರ್ಷ? ಇದಕ್ಕೆ ಸರಿಯಾಗಿ 132.24 ಕೋಟಿ ರೂಪಾಯಿಯಷ್ಟು ಹೆಚ್ಚುವರಿ ಆದಾಯ ರಾಜ್ಯ ಸರ್ಕಾರದ ಖಜಾನೆಗೆ ಸೇರಿದೆ.