BANK JANARDAN ACTOR :
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ನಟನೆಯಿಂದ ಮನೆ ಮಾತಾಗಿದ್ದ ಹಿರಿಯ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ಹೃದಯಘಾತದಿಂದ ನಿಧನರಾಗಿದ್ದಾರೆ. ಬ್ಯಾಂಕ್ ಜನಾರ್ದನ್ ಅವರಿಗೆ 75 ವರ್ಷ ವಯಸ್ಸಾಗಿದ್ದು, ಮಧ್ಯರಾತ್ರಿ ಸುಮಾರು 2.30ರ ವೇಳೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸುಲ್ತಾನ್ ಪಾಳ್ಯದ ಅವರ ನಿವಾಸದಲ್ಲಿ ಪಾರ್ಥೀವ ಶರೀರ ಇಡಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಇನ್ನು ಬ್ಯಾಂಕ್ ಜನಾರ್ಧನ್ ಅವರು ಸಿನಿಮಾರಂಗದಲ್ಲಿ 80, 90ರ ದಶಕದ ಬಹುಬೇಡಿಕೆ ಹಾಸ್ಯ ನಟರಾಗಿದ್ದರು. ಕನ್ನಡ ಸಿನಿಮಾರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದರು, ಬರೋಬ್ಬರಿ 500ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕಾಶೀನಾಥ್ ಅವರು ‘ಅಜಗಜಾಂತರ’ ಸಿನಿಮಾಗೆ ಬ್ಯಾಂಕ್ ಜನಾರ್ಧನ್ ಅವರಿಗೆ ಆಫರ್ ಕೊಟ್ಟರು. ಅಲ್ಲಿಂದ ಅವರ ವೃತ್ತಿಜೀವನ ಬದಲಾಗಿ ಹೋಯಿತು. ಇನ್ನು ಹೆಸರೇ ಸೂಚಿಸುವ ಹಾಗೆ ಇವರು ವಿಜಯಾ ಬ್ಯಾಂಕ್ ನಲ್ಲಿ ಕೆಲಸ ಮಾಡ್ತಿದ್ದ ಕಾರಣಕ್ಕೆ ಇವರನ್ನು ಬ್ಯಾಂಕ್ ಜನಾರ್ದನ್ ಎನ್ನುತ್ತಿದ್ದರು. ಚಿತ್ರರಂಗದಲ್ಲಿ ಬೇಡಿಕೆಯ ಕಲಾವಿದರಾಗಿದ್ದ ಬ್ಯಾಂಕ್ ಜನಾರ್ಧನ್ ಕಲೆ ಮೇಲಿನ ಆಸಕ್ತಿಯಿಂದ ಆರಂಭದಲ್ಲಿ ನಾಟಕಗಳಲ್ಲಿ ತೊಡಗಿಸಿಕೊಂಡು ನಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಇನ್ನು ಇವರು ಕೆಲಸ ಇಲ್ಲದೇ ಕುಳಿತಿರೋದು ಕಡಿಮೇನೆ. ಯಾಕಂದರೆ ಹಾಸ್ಯನಟರಾಗಿ ತಮ್ಮದೇ ಛಾಪು ಮೂಡಿಸುತ್ತಲೇ ಕೆಲಸ ಮಾಡಿಕೊಂಡಿದ್ದರು. ಸಿನಿಮಾ, ಸೀರಿಯಲ್ ಸೇರಿದಂತೆ ನಾಟಕಗಳಲ್ಲಿ ಅಭಿನಯಿಸುತ್ತ ತುಂಬಾನೆ ಆ್ಯಕ್ಟೀವ್ ಆಗಿದ್ದರು. ಓಡಾಡೋ ಇನ್ಸ್‌ಪೆಕ್ಟರ ಕಾಳಪ್ಪ ಆಗಿಯೇ ಕಾಮಿಡಿ ಕಿಕ್ಕೊಟ್ಟಿದ್ದರು, ಒಟ್ಟಾರೆ ಹಾಸ್ಯ ಲೋಕದಲ್ಲಿ ಇವರದೇ ಒಂದು ಹಾದಿ ಇತ್ತು ಅಂತ ಹೇಳಬಹುದು. ಇನ್ನು ಬ್ಯಾಂಕ್ ಜನಾರ್ದನ್ ಅವರ ನಿಧನಕ್ಕೆ ಚಿತ್ರರಂಗದ ಕಲಾವಿದರು ಸೇರಿದಂತೆ, ಆಪ್ತರು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.