ಬೆಂಗಳೂರು : ಬೆಂಗಳೂರಿನಲ್ಲಿ ಮಳೆಯಿಂದ ಹಾನಿಗೊಳಗಾದ ಸಾಯಿ ಲೇಔಟ್‌ಗೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬೈರತಿ ಬಸವರಾಜ್ ಅವರು, ಮುಂದಿನ ಮಳೆಗಾಲದೊಳಗೆ ಸಮಸ್ಯೆಯನ್ನು ಬಗೆಹರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿಕೆಯನ್ನು ನೀಡಿದ್ದಾರೆ.
ಸಾಯಿ ಲೇಔಟ್ ನಲ್ಲಿ ಜನರ ಸಮಸ್ಯೆ ಆಲಿಸಲು ಭೇಟಿ ನೀಡಿದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಬೈರತಿ ಬಸವರಾಜ್ "ಇದು 12 ವರ್ಷಗಳ ಹಿಂದೆ ಆರಂಭವಾದ ಸಮಸ್ಯೆ, ಇಂದಿಗೂ ಈ ಸಮಸ್ಯೆ ಹಾಗೆಯೇ ಉಳಿದಿದೆ. ನಾನು ಮಳೆಯ ದಿನ ಸಹ ಬೆಳಗ್ಗೆ 5 ಗಂಟೆಗೆ ಸ್ಥಳಕ್ಕೆ ಬಂದು ಪರಿಸ್ಥಿತಿ ಪರಿಶೀಲಿಸಿದ್ದೇನೆ. ಮೂಲಭೂತ ಸೌಲಭ್ಯಗಳಿಗಾಗಿ ಸಿಎಂಗೆ ಮನವಿ ಮಾಡಿದ್ದೇನೆ, ಅವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ". ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರು ಕೆ ಆರ್ ಪುರಂ ಕ್ಷೇತ್ರದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. "ಅವರು ಬರಲ್ಲ ಅಂದ್ರೆ ಕೈ ಹಿಡ್ಕೊಂಡು ಎಳೆಯೋಕೆ ಆಗುತ್ತಾ? ನಾನು ನನ್ನ ತತ್ವ ಸಿದ್ಧಾಂತಗಳ ಮೂಲಕ ಕಾರ್ಯ ನಿರ್ವಹಿಸುತ್ತಿದ್ದೇನೆ," ಎಂದರು.
ಇದರ ನಡುವೆಯೇ ಸ್ಥಳೀಯರು ತಮ್ಮ ಅಳಲನ್ನು ಹೇಳಲು ಮುಂದಾದಾಗ, ಕಾರ್ಯಕರ್ತರು ಅವರನ್ನು ತಡೆಯುವಂತಾಯಿತು. ಕೆಲವರು ಪ್ರಶ್ನೆ ಮಾಡುತ್ತಿದ್ದಂತೆಯೇ ಅವಕಾಶವನ್ನು ನೀಡದೇ ಶಾಸಕರು ಸ್ಥಳ ಖಾಲಿಮಾಡಿದರು. ಇನ್ನು ಈ ರೀತಿ ನಿರ್ಗಮಿಸುತ್ತಿದ್ದಂತಯೇ ಜನರ ಅಭಿಪ್ರಾಯ ಕೇಳದೇ ಹೋದ ಶಾಸಕರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.