TUMAKURU: ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗ್ತಿವೆಯಾ ಪೊಲೀಸ್‌ ಚೌಕಿಗಳು?

ತುಮಕೂರು :

ಮಹಾನಗರಗಳಲ್ಲಿ ಟ್ರಾಫಿಕ್‌ ಕಿರಿಕಿರಿ ದಿನೇದಿನೇ ಹೆಚ್ಚಾಗ್ತಿದೆ. ನಮ್ಮ ತುಮಕೂರು ಮಹಾನಗರ ಕೂಡ ಈ ಟ್ರಾಫಿಕ್‌ ಸಮಸ್ಯೆಯಿಂದ ಹೊರತಾಗಿಲ್ಲ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಮ್ಮ ಟ್ರಾಫಿಕ್‌ ಪೊಲೀಸರು ಮಳೆ, ಗಾಳಿ, ಬಿಸಿಲೆನ್ನದೇ ರಸ್ತೆಯಲ್ಲಿ ನಿಂತು ಪ್ರತಿನಿತ್ಯ ಕಾರ್ಯನಿರ್ವಹಿಸುತ್ತಿದ್ರು. ಇವ್ರ ಕಷ್ಟ ನೋಡಲಾಗದೇ ಪೊಲೀಸ್‌ ಇಲಾಖೆ ಪ್ರತಿ ನಗರಗಳಲ್ಲಿಯೂ ಪೊಲೀಸ್‌ ಚೌಕಿಗಳನ್ನು ನಿರ್ಮಾಣ ಮಾಡಿತ್ತು. ಆ ಮೂಲಕ ನಮ್ಮ ಆರಕ್ಷಕ ಸಹೋದರರು ನೆರಳಲ್ಲಿ ಕೂತು ವಾಹನ ಸಂಚಾರವನ್ನ ನಿಯಂತ್ರಿಸುವ ಕೆಲಸ ಮಾಡ್ತಾ ಇದ್ರು. ಆದ್ರೆ ಪೊಲೀಸರ ಅನುಕೂಲಕ್ಕಾಗಿ ನಿರ್ಮಾಣ ಮಾಡಲಾಗಿದ್ದ ಈ ಪೊಲೀಸ್‌ ಚೌಕಿಗಳೇ ಇದೀಗ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗ್ತಿವೆಯಾ ಅನ್ನೋ ಅನುಮಾನಗಳು ಮೂಡೋದಕ್ಕೆ ಶುರುವಾಗಿವೆ.

ತುಮಕೂರು ನಗರದಲ್ಲಿ ನಿರ್ಮಾಣಗೊಂಡಿದ್ದ ಪೊಲೀಸ್‌ ಚೌಕಿಗಳು ಇದೀಗ ಇದ್ದೂ ಇಲ್ಲದಂತಾಗಿವೆ. ಸರಿಯಾದ ನಿರ್ವಹಣೆಯಿಲ್ಲದೆ ಪಾಳುಬಿದ್ದು ಮೂಲೆ ಸೇರಿವೆ. ಇದ್ರ ಜೊತೆಗೆ ಈ ಪೊಲೀಸ್‌ ಚೌಕಿಗಳು ಕುಡುಕರ ಅಡ್ಡೆಯಾಗಿ, ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗ್ತಿವೆ ಅನ್ನೋ ಆರೋಪ ಕೇಳಿಬರ್ತಿದೆ.

ತುಮಕೂರು ನಗರದಾದ್ಯಂತ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಜೊತೆಗೆ ಸಾರ್ವಜನಿಕರ ರಕ್ಷಣೆಯ ದೃಷ್ಟಿಯಿಂದ ಪ್ರಮುಖ ವೃತ್ತಗಳಲ್ಲಿ ಲಕ್ಷಾಂತರ ರೂಪಾಯಿ ಹಣವನ್ನ ಖರ್ಚು ಮಾಡಿ ಪೊಲೀಸ್‌ ಚೌಕಿಗಳನ್ನ ನಿರ್ಮಾಣ ಮಾಡಲಾಗಿತ್ತು. ನಗರದ ಟೌನ್‌ ಹಾಲ್‌ ವೃತ್ತ, ಭದ್ರಮ್ಮ ವೃತ್ತ, ಶಿವಕುಮಾರ ಸ್ವಾಮೀಜಿ ವೃತ್ತ, ಬಟವಾಡಿ, ಕೋಟೆ ಆಂಜನೆಯಸ್ವಾಮಿ ವೃತ್ತ, ಕಾಲ್‌ ಟ್ಯಾಕ್ಸ್‌ ವೃತ್ತ ಹೀಗೆ ನಗರದಲ್ಲಿ ಹದಿನೈದಕ್ಕೂ ಹೆಚ್ಚು ಕಡೆಗಳಲ್ಲಿ ಪೊಲೀಸ್‌ ಚೌಕಿಗಳನ್‌ ನಿರ್ಮಿಸಲಾಗಿತ್ತು. ಆದ್ರೆ ಸದ್ಯ ಒಂದೇ ಒಂದು ಪೊಲೀಸ್‌ ಚೌಕಿಯೂ ಬಳಕೆಯಾಗುತ್ತಿಲ್ಲ. ವರ್ಷಗಳಿಂದ ಇದನ್ನ ನಿರ್ವಹಣೆ ಕೂಡ ಮಾಡಿಲ್ಲ. ಈ ಪೊಲೀಸ್‌ ಚೌಕಿಗಳಿಗೆ ಅಳವಡಿಸಿದ್ದ ಕಿಟಕಿ ಗಾಜುಗಳು ಒಡೆದುಹೋಗಿವೆ. ಅಲ್ಲಿದ್ದ ಉಪಕರಣಗಳು ಹಾಳಾಗಿವೆ.

ಕೇವಲ ಟೌನ್‌ ಹಾಲ್‌ ವೃತ್ತ ಮಾತ್ರವಲ್ಲ, ನಗರದ ಎಲ್ಲಾ ಪೊಲೀಸ್‌ ಚೌಕಿಗಳದ್ದೂ ಇದೇ ಪರಿಸ್ಥಿತಿ. ಭದ್ರಮ್ಮ ವೃತ್ತದಲ್ಲಿರುವ ಪೊಲೀಸ್‌ ಚೌಕಿಯೂ ಹಾಳು ಬಿದ್ದಿದೆ. ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿರುವ ಪೊಲೀಸ್‌ ಚೌಕಿ ಕೂಡ ಹಳ್ಳ ಹಿಡಿದಿದೆ. ನಗರದ ಬೇರೆ ಬೇರೆ ಕಡೆ ಇರೋ ಪೊಲೀಸ್‌ ಚೌಕಿಗಳ ಪರಿಸ್ಥಿತಿಯ ಬಗ್ಗೆಯೂ ಮತ್ತೆ ನಾವು ಹೆಚ್ಚೇನೂ ಹೇಳಬೇಕಿಲ್ಲ. ಇನ್ನು ಬಟವಾಡಿ ಸಿಗ್ನಲ್‌ ಬಳಿ ಇರೋ ಪೊಲೀಸ್‌ ಚೌಕಿಯಂತೂ ಕುಡುಕರ ಅಡ್ಡೆಯಾಗಿರೋ ಅನುಮಾನಗಳು ಮೂಡ್ತಿವೆ. ಯಾಕಂದ್ರೆ ಈ ಪೊಲೀಸ್‌ ಚೌಕಿಯ ಒಳಗಡೆ ಚಿಪ್ಸ್‌ ಪ್ಯಾಕೆಟ್‌ಗಳು, ಪ್ಲಾಸ್ಟಿಕ್‌ ಕವರ್‌ ಗಳು ಎಲ್ಲಾ ಬಿದ್ದಿವೆ.

Author:

...
Keerthana J

Copy Editor

prajashakthi tv

share
No Reviews