ಪಾವಗಡ:
ಸರ್ಕಾರಿ ಕಚೇರಿ ಅಂದ್ರೆ ದೇವರ ಕೆಲಸ ಅಂತಾರೆ… ಆದ್ರೆ ಕೆಲವರು ಮಾತ್ರ ಅದ್ಯಾವಾಗ ಬರ್ತಾರೋ… ಹೋಗ್ತಾರೋ… ಒಂದು ಗಂಟೆಯಲ್ಲಿ ಆಗುವ ಕೆಲಸವನ್ನು ದಿನ ಪೂರ್ತಿ ಮಾಡುವ ಉದಾಹರಣೆಗಳನ್ನು ಕೂಡ ನಾವು ನೋಡಿದ್ದೇವೆ.. ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳೋದೇ ಜನರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಕೆಲವೊಮ್ಮೆ ಅಧಿಕಾರಿಗಳಿಗೆ ಹುಡುಕುವುದೇ ಜನರ ಕೆಲಸವಾಗಿರುತ್ತೆ.. ಇದಕ್ಕೆ ಉದಾಹರಣೆಯಂತೆ ಪಾವಗಡದಲ್ಲೊಂದು ಘಟನೆ ನಡೆದಿದೆ. ಹೌದು ಪಾವಗಡ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯ್ತಿಯ ಆಡಳಿತ ವರ್ಗದವರು ಕಾಣೆಯಾಗಿದ್ದಾರೆ ಹುಡುಕಿ ಕೊಡಿ, ಅಂತ ಸಾರ್ವಜನಿಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ಫುಲ್ ವೈರಲ್ ಆಗಿದೆ.
ಪಾವಗಡ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಸುಮಾರು 11 ಗಂಟೆ ಆದ್ರು ಕೂಡ ಅಧಿಕಾರಿಗಳು ಬಂದಿರದ ಕಾರಣ, ಅದೇ ಗ್ರಾಮದ ಪರಮೇಶ್ ಎಂಬಾತ ಕಚೇರಿ ಬಳಿ ಕಾದು ಕಾದು ಸಾಕಾಗಿ, ಅಧಿಕಾರಿಗಳ ಕಳ್ಳಾಟಕ್ಕೆ ಬೇಸತ್ತು ವಿಡಿಯೋ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಕಚೇರಿಯಲ್ಲಿ ಕಂದಾಯ ಕಟ್ಟಲು ಬಂದ ಸ್ಥಳೀಯರಿಗೆ ಪಿಡಿಒ ಆಗಲಿ ಅಧಿಕಾರಿಗಳಾಗಲಿ ಸರಿಯಾಗಿ ಸಿಗ್ತಿಲ್ಲ, ಅಧಿಕಾರಿಗಳು ವಾರಕ್ಕೆ ಎರಡರಿಂದ ಮೂರು ದಿನ ಮಾತ್ರ ಬರ್ತಾರೆ ಉಳಿದಂತೆ ಸಿಗೋದಿಲ್ಲ. ಅಲ್ದೇ ಗ್ರಾಮದ ಸಮಸ್ಯೆ ಹೇಳಿಕೊಳ್ಳಲು ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿದ್ರೆ ಅಧಿಕಾರಿ ವರ್ಗದವರು ಇರದೇ ಕಾಣೆಯಾಗಿದ್ದಾರೆ, ಮೇಲಾಧಿಕಾರಿಗಳು ಪಂಚಾಯ್ತಿ ಮೇಲೆ ಗಮನ ಹರಿಸಿ ಕಾಣೆಯಾಗಿರುವ ಅಧಿಕಾರಿಯನ್ನ ಹುಡುಕಿ ಕೊಡಬೇಕು ಅಂತ ಗ್ರಾಮಸ್ಥ ಒತ್ತಾಯಿಸಿದ್ದಾರೆ. ಈ ವಿಡಿಯೋ ಪಾವಗಡದಲ್ಲಿ ಫುಲ್ ವೈರಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ.