ಶಿರಾ:
ಶಿರಾ ತಾಲೂಕಿನ ಶಿರಾ- ಅಮರಪುರ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಗುಂಡಿ ಗಂಡಾಂತರಕ್ಕೆ ಇಬ್ಬರು ಅಮಾಯಕ ಜೀವಗಳು ಈಗಾಗಲೇ ಬಲಿಯಾಗಿವೆ. ಫೆಬ್ರವರಿ 26ರಂದು ಗುಂಡಿಯನ್ನು ತಪ್ಪಿಸಲು ಹೋಗಿ ಬೈಕ್ ಸವಾರ ಸಾವನ್ನಪ್ಪಿದ್ದ. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದಾರುಣ ಘಟನೆ ನಡೆದಿದೆ. ಹೌದು ರಸ್ತೆ ಗುಂಡಿಗೆ ಈಗ ಮತ್ತೊಂದು ಬಲಿಯಾಗಿದೆ. ಗುಂಡಿಯಿಂದಾಗಿ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿದ್ದರಿಂದ ಟ್ರ್ಯಾಕ್ಟರ್‌ನಿಂದ ಬಿದ್ದು ನರಸಿಂಹಮೂರ್ತಿ ಎಂಬ ಯುವಕ ಸಾವನ್ನಪ್ಪಿದ್ದಾನೆ. ಮೃತ ಯುವಕ ನರಸಿಂಹಮೂರ್ತಿ ರಾಗನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ರಸ್ತೆ ಸೇತುವೆ ನಿರ್ಮಾಣಕ್ಕೆಂದು ರಸ್ತೆಯನ್ನು ಅಗೆಯಲಾಗಿದೆ ಜೊತೆಗೆ ಒಂದೇ ಒಂದು ಸೂಚನಾ ಫಲಕಗಳನ್ನು ಹಾಕಲಾಗಿಲ್ಲ. ಇದ್ರಿಂದ ರಸ್ತೆ ಗುಂಡಿಗೆ ಬಿದ್ದ ಅಮಾಯಕ ಜೀವಗಳು ಬಲಿಯಾಗುತ್ತಲೇ ಇವೆ. ಫೆಬ್ರವರಿ 26ರಂದು ಬೈಕ್ ಸವಾರ ಸಾವನ್ನಪ್ಪಿದ್ದ ಬೆನ್ನಲ್ಲೇ ಶಿರಾ ತಾಲೂಕಿನ ಅಮರಪುರ ರಸ್ತೆ ಹೊಂಡ ಗುಂಡಿಗಳ ಅವ್ಯವಸ್ಥೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನೆ ನಡೆಸಿದ್ರು ಕೂಡ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡು ಗುಂಡಿಗಳನ್ನು ಮುಚ್ಚುವ ಕೆಲಸ ಮಾತ್ರ ಮಾಡಿಲ್ಲ. ಇದೀಗ ಗುಂಡಿಗೆ ಮತ್ತೊಂದು ಬಲಿಯಾಗಿದ್ದು ಸಾರ್ವಜನಿಕರ ಆಕ್ರೋಶದ ಕಟ್ಟೆ ಹೊಡೆದಿದೆ.