ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿಕೊಂಡರು. 48ನೇ ವರ್ಷಕ್ಕೆ ಕಾಲಿಟ್ಟ ದರ್ಶನ್ಗೆ ಸ್ಯಾಂಡಲ್ವುಡ್ ತಾರೆಯರು, ಗಣ್ಯರು ಹಾಗೂ ಅವರ ಅಪಾರ ಅಭಿಮಾನಿಗಳು ತುಂಬು ಹೃದಯದಿಂದ ಶುಭಾಶಯ ಕೋರಿ ಒಳ್ಳೆಯದಾಗಲಿ ಎಂದು ಹಾರೈಸಿದರು. ಯಾವ ಅಭಿಮಾನಿಗಳನ್ನೂ ಸಹ ಭೇಟಿಯಾಗದೆ ಸರಳವಾಗಿ ಕುಟುಂಬ ಮತ್ತು ಕೆಲವೇ ಕೆಲವು ಗೆಳೆಯರ ಜೊತೆಗೂಡಿ ಕೇಕ್ ಕತ್ತರಿಸಿ ದಾಸ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.
ಹುಟ್ಟುಹಬ್ಬಕ್ಕೆ ಕೆಲ ದಿನಗಳ ಮುಂಚೆಯೇ ವಿಡಿಯೋ ಹಂಚಿಕೊಂಡಿದ್ದ ದರ್ಶನ್, ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂದಿದ್ದರು. ಅಪಾರ ಅಭಿಮಾನಿಗಳ ಬಳಗ ಹೊಂದಿರುವ ದರ್ಶನ್, ಬೆಂಬಲಿಗರು ತೋರಿಸುತ್ತಿರುವ ಪ್ರೀತಿಗೆ ಭಾವುಕರಾಗಿದ್ದಾರೆ. ಬರ್ತಡೇ ಸಂಭ್ರಮ ಮುಗಿದು ಎರಡು ದಿನಗಳ ಬಳಿಕ, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರೀತಿಯ ಸೆಲೆಬ್ರಿಟಿಸ್ಗಳೇ
ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಭಾಸವಾಗುತ್ತದೆ. ಕಷ್ಟದಲ್ಲಿದ್ದಾಗ ಸದಾ ಬೆಂಬಲದಲ್ಲಿ ನಿಲ್ಲುವಂತಹ ಈ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ಪ್ರೋತ್ಸಾಹ ಮತ್ತು ಬೆಂಬಲವೇ ನನ್ನ ಜೀವನದ ನಿಜವಾದ ಆಸ್ತಿ.
ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸುವ ನಿಮ್ಮ ಪ್ರೀತಿಯ ಆಶೀರ್ವಾದಕ್ಕೆ ನಾನು ಮನದಾಳದಿಂದ ಕೃತಜ್ಞನಾಗಿದ್ದೇನೆ. ನೀವು ಹಲವೆಡೆ ಮಾಡುತ್ತಿರುವ ದಾನ-ಧರ್ಮ ಕಾರ್ಯಗಳು ಸಹಸ್ರಾರು ಹೃದಯಗಳನ್ನು ಸ್ಪರ್ಶಿಸುವಂತಹದ್ದು. ನಿಮ್ಮ ಈ ಕೆಲಸಗಳು ಅನೇಕರಿಗೆ ದಾರಿ ದೀಪವಾಗಲಿ.
ನಿಮ್ಮ ಮನದಾಳದ ಪ್ರೀತಿಯ ಹಾರೈಕೆಗಳು ನನ್ನ ಮುಂದಿನ ಹೆಜ್ಜೆಗೆ ದಾರಿ ತೋರುವ ಬೆಳಕು ಎಂದರೆ ಅತಿಶಯೋಕ್ತಿಯಲ್ಲ. ಆದಷ್ಟು ಬೇಗ ನಿಮ್ಮನ್ನು ಕಾಣುವ ಹಂಬಲ, ಕಾತುರ ನನ್ನಲಿಯೂ ಇದೆ. ನಿಮ್ಮನ್ನು ಪಡೆದಿರುವ ನಾನೇ ಧನ್ಯ ಎಂದಿದ್ದಾರೆ ದರ್ಶನ್.