ಕಂಬ್ಯಾಕ್ ಸುಳಿವು ನೀಡಿದ ಎಬಿ ಡಿವಿಲಿಯರ್ಸ್

ಸಿಡಿಲಬ್ಬರದ ಸಿಡಿಲಮರಿ ಎಬಿ ಡಿವಿಲಿಯರ್ಸ್ ಕ್ರಿಕೆಟ್ ಅಂಗಳಕ್ಕೆ ಮರಳುವ ಸೂಚನೆ ನೀಡಿದ್ದಾರೆ. 2021 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಎಬಿಡಿ ಇದೀಗ ಮತ್ತೆ ಕ್ರಿಕೆಟ್ ಆಡಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳುವ ಸೂಚನೆಯನ್ನು ಸಹ ನೀಡಿದ್ದಾರೆ.

ರನ್ನಿಂಗ್ ಬಿಟ್ವೀನ್ ದಿ ವಿಕೆಟ್ಸ್‌ನ ಸಂದರ್ಶನದಲ್ಲಿ ಮಾತನಾಡಿದ ಡಿವಿಲಿಯರ್ಸ್, ನಾನು ಮತ್ತೆ ಕ್ರಿಕೆಟ್​ ಅಂಗಳಕ್ಕೆ ಮರಳಬಹುದು. ಏಕೆಂದರೆ ನನ್ನ ಮಕ್ಕಳು ನಾನು ಆಡಬೇಕೆಂದು ಒತ್ತಡ ಹೇರುತ್ತಿರುತ್ತಾರೆ. ಅವರಿಗಾಗಿ ನಾನು ಮತ್ತೆ ಕ್ರಿಕೆಟ್ ಆಡಬೇಕೆಂದಿರುವೆ ಎಂದು ತಿಳಿಸಿದ್ದಾರೆ.ಈ ಹಿಂದೆ ಎಬಿಡಿ ಡಿವಿಲಿಯರ್ಸ್ ಕಣ್ಣು ದೃಷ್ಟಿ ಸಮಸ್ಯೆಯ ಕಾರಣ ದಿಢೀರ್ ನಿವೃತ್ತಿ ಘೋಷಿಸಿದ್ದರು. ಈ ಬಗ್ಗೆ ಮಾತನಾಡಿದ ಎಬಿಡಿ, ನನ್ನ ಎಡಗಣ್ಣು ಸ್ವಲ್ಪ ಮಸುಕಾಗಿದ್ದರೂ, ಈಗ ಬಲಗಣ್ಣು ಪ್ರಬಲವಾಗಿದೆ. ಹೀಗಾಗಿ ಚೆಂಡನ್ನು ಚೆನ್ನಾಗಿ ಗುರುತಿಸಬಲ್ಲೆ ಎಂದು ತಿಳಿಸಿದ್ದಾರೆ.

RCB ತಂಡದ ಆಪತ್ಭಾಂಧವರಾಗಿದ್ದ ಎಬಿ ಡಿವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 157 ಪಂದ್ಯಗಳಾಡಿದ್ದಾರೆ. ಈ ವೇಳೆ ಒಟ್ಟು 4522 ರನ್‌ಗಳನ್ನು ಕಲೆಹಾಕಿದ್ದರು. ಅಷ್ಟೇ ಅಲ್ಲದೆ ಆರ್​ಸಿಬಿ ಪರ ಅತೀ ಹೆಚ್ಚು ರನ್ ಬಾರಿಸಿದ ವಿದೇಶಿ ಬ್ಯಾಟರ್ ಎಂಬ ದಾಖಲೆಯನ್ನೂ ಕೂಡ ಹೊಂದಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಬಳಿಕ ಆರ್​ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್ ಎಂಬ ದಾಖಲೆ ಕೂಡ ಎಬಿಡಿ ಹೆಸರಿನಲ್ಲಿದೆ.

Author:

...
Editor

ManyaSoft Admin

Ads in Post
share
No Reviews