ಹಾಸನ : ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ

ಹಾಸನ : ಸಿನಿಮಾ ದೃಶ್ಯದಂತೆ ತಾಳಿ ಕಟ್ಟುವ ವೇಳೆ ವಧು ಮದುವೆಯನ್ನೇ ನಿಲ್ಲಿಸಿದ ಘಟನೆ ಹಾಸನ ನಗರದಲ್ಲಿ ನಡೆದಿದೆ. ಹಾಸನ ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಿಶ್ಚಿತವಾಗಿದ್ದ ಮದುವೆ ಅಂತಿಮ ಕ್ಷಣದಲ್ಲಿ ರದ್ದಾಗಿದೆ. ಈ ಅಚ್ಚರಿಯ ಘಟನೆ ಮಹೂರ್ತದ ವೇಳೆಯೇ ನಡೆದಿದೆ.

ಹಾಸನ ತಾಲ್ಲೂಕಿನ ಬೂವನಹಳ್ಳಿ ಗ್ರಾಮದ ಯುವತಿ ಪಲ್ಲವಿ ಹಾಗೂ ಆಲೂರು ತಾಲ್ಲೂಕಿನ ವೇಣುಗೋಪಾಲ.ಜಿ ಅವರ ಮದುವೆ ಇಂದು ನಿಗದಿಯಾಗಿತ್ತು. ಆದರೆ ತಾಳಿ ಕಟ್ಟುವ ಕ್ಷಣದಲ್ಲಿ ಪಲ್ಲವಿಗೆ ಬಂದ ಫೋನ್ ಕಾಲ್ ನಂತರ ಮನಸ್ಸು ಬದಲಾಯಿಸಿ ಮದುವೆ ಬೇಡವೆಂದು ಹಠ ಹಿಡಿದಿದ್ದಾಳೆ. ಪಲ್ಲವಿ ತುರ್ತುವಾಗಿ ಮಂಟಪದ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು, ಪೋಷಕರು ಮತ್ತು ಸ್ಥಳೀಯ ಪೊಲೀಸರು ಬಂದು ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರೂ ಫಲವಾಗಲಿಲ್ಲ. ಯುವತಿಯು "ನಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ, ಈ ಮದುವೆ ನನ್ನಿಂದ ಆಗದು" ಎಂದು ಸ್ಪಷ್ಟವಾಗಿ ತಿಳಿಸಿದ್ದಾಳೆ.

ಪಲ್ಲವಿಯ ನಿರ್ಧಾರದ ಬೆನ್ನಲ್ಲೆ ವರನಾಗಿದ್ದ ವೇಣುಗೋಪಾಲ ಕೂಡ ಮದುವೆ ಬೇಡವೆಂದು ಹೇಳಿದ್ದು, ಮದುವೆಯ ಸಂಪೂರ್ಣ ಶಾಸ್ತ್ರ ಆಚರಣೆ ಸ್ಥಗಿತಗೊಂಡಿದೆ. ಈ ಘಟನೆ ಪೋಷಕರಿಗೆ ಭಾರೀ ಆಘಾತವಾಗಿ ಪರಿಣಮಿಸಿದ್ದು, ತಾವು ನೋಡಲಿದ್ದ ಮಗಳ ಮದುವೆ ಮುರಿದುದರಿಂದ ಕಣ್ಣೀರು ಹಾಕಿದ್ದಾರೆ.

ಇನ್ನು ಸ್ಥಳೀಯ ಪೊಲೀಸರು ಹಾಗೂ ಸಂಬಂಧಿಕರು ಘಟನೆಯ ಬಗ್ಗೆ ಸ್ಪಷ್ಟ ಮಾಹಿತಿ ಕಲೆಹಾಕುತ್ತಿರುವುದಾಗಿ ತಿಳಿದುಬಂದಿದೆ. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

 

Author:

...
Keerthana J

Copy Editor

prajashakthi tv

share
No Reviews