ರಾಮನಗರ : ರಾಮನಗರ ಜಿಲ್ಲೆಯ ಹಳ್ಳಿಮಾಳದ ಬಳಿ ಹೃದಯವಿದ್ರಾವಕ ಘಟನೆ ನಡೆದಿದೆ. ದರ್ಗಾಗೆ ಭೇಟಿ ನೀಡಿದ ವೇಳೆ ಆಟವಾಡಲು ನದಿಗೆ ಹೋದ 9 ವರ್ಷದ ಬಾಲಕನೊಬ್ಬ ಅರ್ಕಾವತಿ ನದಿಯಲ್ಲಿ ಕಾಲುಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಕೊಚ್ಚಿಹೋದ ಬಾಲಕನನ್ನು ಬೆಂಗಳೂರಿನ ಲಕ್ಕಸಂದ್ರದ ನಿವಾಸಿ ರಿಯಾಜ್ ಹಾಗೂ ಸಮೀಮ್ ಭಾನು ದಂಪತಿಗಳ ಮಗ ಮೊಹಮ್ಮದ್ ಸೈಫ್ ಎಂದು ಗುರುತಿಸಲಾಗಿದೆ. ಅರ್ಕಾವತಿ ನದಿ ಪಕ್ಕದಲ್ಲಿರುವ ದರ್ಗಾಗೆ ಬೆಂಗಳೂರಿನ ಲಕ್ಕಸಂದ್ರದ ನಿವಾಸಿಗಳಾದ ರಿಯಾಜ್ ಮತ್ತು ಸಮೀಮ್ ಭಾನು ತಮ್ಮ ಪುತ್ರನ ಜೊತೆ ಬಂದಿದ್ದರು. ಈ ಸಂದರ್ಭ ನದಿಯಲ್ಲಿಯೇ ಆಟವಾಡುತ್ತಿದ್ದ ಸೈಫ್ ಅಚಾನಕ್ ಕಾಲುಜಾರಿ ನೀರಿನ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ.
ಇನ್ನು ಘಟನೆಯ ಸುದ್ದಿ ದೊರಕಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ರಾಮನಗರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಬಾಲಕ ಪತ್ತೆಯಾಗದೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದು, ರಾಮನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.