Parappana Agrahara ಕಾರಾಗೃಹದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿ – ಕೈದಿಗಳ ಚಲನವಲನಗಳ ಸಂಪೂರ್ಣ ದತ್ತಾಂಶ ಸಂಗ್ರಹ

Parappana Agrahara ಕೇಂದ್ರ ಕಾರಾಗೃಹದಲ್ಲಿ ಅನುಚಿತ ವರ್ತನೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ‘ಪ್ರಿಸನರ್ಸ್ ಟ್ರ್ಯಾಕಿಂಗ್ ಮೂವ್ಮೆಂಟ್ ಸಿಸ್ಟಂ’ ಜಾರಿಗೆ ತರಲಾಗಿದೆ.
ಇನ್ನು ಮುಂದೆ ಜೈಲಿನ ಪ್ರತಿಯೊಂದು ಬ್ಯಾರಕ್ಗೆ ಪ್ರವೇಶಿಸುವ ವೇಳೆ ಕೈದಿಗಳು ಬಯೋಮೆಟ್ರಿಕ್ ದೃಢೀಕರಣ ಮಾಡುವುದು ಕಡ್ಡಾಯವಾಗಲಿದೆ.
ಕೈದಿಗಳ ಚಲನವಲನಗಳ ಸಂಪೂರ್ಣ ದತ್ತಾಂಶ ಸಂಗ್ರಹ
ಈಗಾಗಲೇ ಜೈಲಿನಲ್ಲಿ ಕೃತಕ ಬುದ್ದಿಮತ್ತೆ (ಎಐ) ಕ್ಯಾಮೆರಾಗಳ ಮೂಲಕ ಕೈದಿಗಳು ಮತ್ತು ಅಧಿಕಾರಿ-ಸಿಬ್ಬಂದಿ ಮೇಲೆ ನಿಗಾವಹಿಸಲಾಗಿತ್ತು. ಇದೀಗ ಅದರೊಂದಿಗೆ ಕೈದಿಗಳ ಫೋನ್ ಕರೆ ವ್ಯವಸ್ಥೆ ಸಂಪೂರ್ಣ ಡಿಜಿಟಲ್ ಟ್ರ್ಯಾಕಿಂಗ್, ಸಂದರ್ಶಕರನ್ನು ಭೇಟಿಯಾಗಲು ಡಿಜಿಟಲ್ ಟೋಕನ್ ಪದ್ಧತಿ ಸೇರಿ ಕಾರಾಗೃಹ ಬಂಧಿಗಳ ಚಲನವಲನಗಳ ಮೇಲೆ ಸಂಪೂರ್ಣ ನಿಗಾ ಇಡಲು ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದಕ್ಕೆ ಸುಮಾರು 2.25 ಕೋಟಿ ರೂ. ವೆಚ್ಚವಾಗಿದೆ ಎಂದು ಜೈಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರತ್ಯೇಕ ಒಪಿಡಿ ವ್ಯವಸ್ಥೆ
ಶಿಕ್ಷಾಬಂಧಿಗಳು ಹಾಗೂ ವಿಚಾರಣಾಧೀನ ಕೈದಿಗಳು ಪ್ರತ್ಯೇಕ ಬ್ಯಾರಕ್ಗಳಲ್ಲಿ ಇದ್ದರೂ, ಊಟ ಮತ್ತು ಚಿಕಿತ್ಸೆಯ ನೆಪದಲ್ಲಿ ಒಂದೇ ಸ್ಥಳದಲ್ಲಿ ಸೇರಿ ಪರಸ್ಪರ ಸಂಪರ್ಕ ಬೆಳೆಸುತ್ತಿರುವುದು ಕಂಡುಬಂದಿತ್ತು. ಇದರಿಂದ ಜೈಲಿನ ಒಳಗೂ ಹೊರಗೂ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಸಿಗುತ್ತಿದೆ ಎಂಬ ಆತಂಕ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ವಿಚಾರಣಾಧೀನ ಕೈದಿಗಳು ಹಾಗೂ ಶಿಕ್ಷಾಬಂಧಿಗಳಿಗೆ ಪ್ರತ್ಯೇಕ ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ, ಸಣ್ಣಪುಟ್ಟ ಚಿಕಿತ್ಸೆಗೆ ಪ್ರತ್ಯೇಕ ಹೊರರೋಗಿಗಳ ವಿಭಾಗ (ಒಪಿಡಿ) ಆರಂಭಿಸಲು ಜೈಲು ಇಲಾಖೆ ಮುಂದಾಗಿದೆ.
ಗಂಭೀರ ಅನಾರೋಗ್ಯಕ್ಕೊಳಗಾದ ಕೈದಿಗಳಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
READ THIS : ಪ.ಬಂಗಾಳದಲ್ಲಿ ಸುವೇಂದು ʻಅಧಿಕಾರʼ – ಬಿಜೆಪಿ ಮೊದಲ CM ಆಗಿ ಪ್ರಮಾಣ ಸ್ವೀಕಾರ

ಎಲ್ಲೆಡೆ ಬಯೋಮೆಟ್ರಿಕ್ ನಿಗಾ
ಇನ್ನು ಜೈಲಿನ ಬ್ಯಾರಕ್ಗಳು, ಆಸ್ಪತ್ರೆ, ಸಂದರ್ಶಕರ ಕೊಠಡಿ, ಗ್ರಂಥಾಲಯ, ಕ್ಯಾಂಟೀನ್, ಅಡುಗೆಮನೆ, ಮೈದಾನ, ಕರಕುಶಲ ಕಾರ್ಖಾನೆಗಳು ಹಾಗೂ ಬೇಕರಿ ಸೇರಿ ಎಲ್ಲೆಡೆ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಲಾಗಿದೆ.
ಸಂದರ್ಶಕರನ್ನು ಭೇಟಿಯಾಗಲು ತೆರಳುವ ಕೈದಿಗಳು ಮೊದಲು ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಡಿಜಿಟಲ್ ಟೋಕನ್ ಪಡೆಯಬೇಕಾಗುತ್ತದೆ.
ಟೋಕನ್ನಲ್ಲಿ ಕೈದಿಯ ಹೆಸರು, ಸಂಖ್ಯೆ, ಸಮಯ ಸೇರಿದಂತೆ ಎಲ್ಲ ಮಾಹಿತಿಯನ್ನು ಸಾಫ್ಟ್ವೇರ್ನಲ್ಲಿ ದಾಖಲಿಸಲಾಗುತ್ತದೆ. ಇದರಿಂದ ಕೈದಿಯ ಪ್ರತಿ ಭೇಟಿ ಹಾಗೂ ಚಲನವಲನಗಳ ಸಂಪೂರ್ಣ ಮಾಹಿತಿ ಸಂಗ್ರಹವಾಗಲಿದೆ.
ಅದೇ ರೀತಿಯಲ್ಲಿ ಆಸ್ಪತ್ರೆ, ಗ್ರಂಥಾಲಯ ಹಾಗೂ ಇತರೆ ಬ್ಯಾರಕ್ಗಳ ಪ್ರವೇಶ ದ್ವಾರಗಳಲ್ಲೂ ಇದೇ ವ್ಯವಸ್ಥೆ ಜಾರಿಗೊಂಡಿದ್ದು, ಕೈದಿಗಳ ಚಟುವಟಿಕೆಗಳನ್ನು ಕ್ಷಣಕ್ಷಣಕ್ಕೂ ಟ್ರ್ಯಾಕ್ ಮಾಡಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ಯಾಂಟೀನ್ ಯೂಸೇಜ್ ಸಿಸ್ಟಂ
ಕೈದಿಗಳ ಪ್ರತಿಯೊಂದು ಚಲನವಲನ ತಿಳಿಯಲು ಇಲಾಖೆಯು ಕ್ಯಾಂಟೀನ್ ಯೂಸೇಜ್ ಸಿಸ್ಟಂ ಜಾರಿಗೆ ತರಲಾಗಿದೆ. ಜೈಲಿನಲ್ಲಿರುವ ಕ್ಯಾಂಟೀನ್ನಲ್ಲಿ ನೇರವಾಗಿ ಹಣ ಪಾವತಿಸದೆ ಸದ್ಯ ಇರುವ ವಾಲೆಟ್ ಅಥವಾ ಕೂಪನ್ ನೀಡಿ (ಹಣ ಪಾವತಿಸಿ ಕೂಪನ್ ಪಡೆಯಬೇಕು) ಬನ್ – ಬಿಸ್ಕತ್ ಸೇರಿ ಬೇಕರಿ ತಿನಿಸುಗಳನ್ನು ತಿನ್ನಲು ಖರೀದಿಸಬಹುದಾಗಿದೆ.
ಈ ಮೂಲಕ ಖರೀದಾರನ ಹೆಸರು, ಖರೀದಿ ಮಾಡಿದ ವಸ್ತು, ಅದರ ಪ್ರಮಾಣ, ಸಮಯ ಹಾಗೂ ದಿನಾಂಕ, ವಾಲೆಟ್ನಲ್ಲಿ ಬಾಕಿಯಿರುವ ಹಣ ಸೇರಿ ಪ್ರತಿಯೊಂದು ಮಾಹಿತಿಯೂ ಟ್ರ್ಯಾಕ್ ಆಗಲಿದೆ.
ಇದರಿಂದ ಕೈದಿಯ ಪ್ರತಿ ಖರ್ಚಿನ ವಿವರದ ದತ್ತಾಂಶಗಳಲ್ಲಿ ಸಂಗ್ರಹಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

MUST WATCH : ಜನರಿಗೆ ಮತ್ತೊಂದು ದರ ಏರಿಕೆ ಶಾಕ್..! – ತರಕಾರಿ ರೇಟ್ ಕೇಳಿದ್ರೆ ತಿನ್ನೋದೇ ಬಿಡ್ತಿರಾ..?!




