Kalaburagi ಜಿಲ್ಲೆಯ ಸೇಡಂ ತಾಲ್ಲೂಕಿನ ಮುಗನೂರ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಮುಳುಗಿ ಚಿಕ್ಕಪ್ಪ ಹಾಗೂ 10 ವರ್ಷದ ಬಾಲಕ ಮೃತಪಟ್ಟ ದುರಂತ ಘಟನೆ ನಡೆದಿದೆ.

Kalaburagi ಜಿಲ್ಲೆಯ ಸೇಡಂ ತಾಲ್ಲೂಕಿನ ಮುಗನೂರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಕೃಷಿ ಹೊಂಡದಲ್ಲಿ ಮುಳುಗಿ ಚಿಕ್ಕಪ್ಪ ಹಾಗೂ 10 ವರ್ಷದ ಬಾಲಕ ಮೃತಪಟ್ಟಿರುವ ದುರ್ಘಟನೆ ನಡೆದಿದ್ದು,
ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಮೃತರನ್ನು ಮುಗನೂರ ಗ್ರಾಮದ ಭದ್ರಸ್ವಾಮಿ (32) ಹಾಗೂ ಸದಾಶಿವ ಸ್ವಾಮಿ (10) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಭದ್ರಸ್ವಾಮಿ ಮತ್ತು ಸದಾಶಿವ ಸ್ವಾಮಿ ಎಮ್ಮೆ ಮೇಯಿಸಲು ಗ್ರಾಮದ ಹೊರವಲಯಕ್ಕೆ ತೆರಳಿದ್ದರು. ಆದರೆ ಸಂಜೆ ವೇಳೆಯಾದರೂ ಇಬ್ಬರೂ ಮನೆಗೆ ಮರಳದ ಕಾರಣ ಕುಟುಂಬಸ್ಥರು ಆತಂಕಗೊಂಡಿದ್ದರು.
ಇದೇ ವೇಳೆ ಅವರು ಮೇಯಿಸಲು ಕರೆದೊಯ್ದ ಎಮ್ಮೆಗಳು ಮಾತ್ರ ಗ್ರಾಮಕ್ಕೆ ವಾಪಸ್ಸಾಗಿದ್ದವು. ಇದರಿಂದ ಅನುಮಾನಗೊಂಡ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಹುಡುಕಾಟ ಆರಂಭಿಸಿದರು.
MUST READ : Dina Bhavishaya : ಇಂದು ಈ ರಾಶಿಗೆ, ಮಹಾದೇವನ ದೆಸೆಯಿಂದ ಸರ್ವ ಸುಖವೂ ಪ್ರಾಪ್ತಿ…!

ಹುಡುಕಾಟದ ವೇಳೆ ಗ್ರಾಮದ ಹೊರವಲಯದಲ್ಲಿರುವ ಕೃಷಿ ಹೊಂಡದ ಬಳಿ ಇಬ್ಬರ ಬಟ್ಟೆ ಹಾಗೂ ಮೊಬೈಲ್ ಪತ್ತೆಯಾಗಿದೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು,
ಅವರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದರು. ಬಳಿಕ ಕೃಷಿ ಹೊಂಡದಿಂದ ಭದ್ರಸ್ವಾಮಿ ಹಾಗೂ ಸದಾಶಿವ ಸ್ವಾಮಿ ಅವರ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಇಬ್ಬರೂ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಾವಿನ ನಿಖರ ಕಾರಣ ತಿಳಿಯಲು ಹೆಚ್ಚಿನ ತನಿಖೆ ಮುಂದುವರಿದಿದೆ.
ಈ ದುರ್ಘಟನೆಯಿಂದ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮುಗನೂರ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಗ್ರಾಮಸ್ಥರು ಮೃತರ ಕುಟುಂಬಕ್ಕೆ ಸಾಂತ್ವನ ಸೂಚಿಸಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಕೃಷಿ ಹೊಂಡಗಳ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
MUST WATCH : ಆರ್ ಎಸ್ ಎಸ್ , ಬಿಜೆಪಿ ವಿರುದ್ಧ ಸಿದ್ದು ಗುಡುಗು ಹರಿಪ್ರಸಾದ್ ಜೊತೆ ನಿಲ್ಲುವಂತೆ ಸಲಹೆ




